ಸುಳ್ಯ: ಸರ್, ನಾನು ಸ್ವಂತ ಆಫೀಸ್ ಮಾಡ್ತಿದ್ದೇನೆ. ಉದ್ಘಾಟಿಸಲು ನೀವು ಬರಲೇಬೇಕು ಎಂಬ ಆಮಂತ್ರಣವನ್ನು ನಮ್ಮ ವಿದ್ಯಾರ್ಥಿಯಿಂದಲೇ ಪಡೆಯುವುದು ಎಂತಹ ಭಾಗ್ಯ! ಆ ಭಾಗ್ಯ ನಮ್ಮದಾಗಿತ್ತು. ಉದ್ಘಾಟನೆಯೊಂದಿಗೆ ನಮಗೆ ಸನ್ಮಾನವು ಬೇರೆ!!! ಇದು ನಮ್ಮ ವಿದ್ಯಾರ್ಥಿಯಾಗಿದ್ದ ಅನೀಶ್ ನೀಡಿದ ಗೌರವದ ಸುಖ. ಹೀಗೆ ನಮ್ಮ ಒಬ್ಬೊಬ್ಬ ವಿದ್ಯಾರ್ಥಿಯ ಸಾಧನೆಯ ಸಮಾಚಾರವೂ ಸುಖದಾಯಕ. ಮಾಹಿತಿ ಕಲೆಹಾಕಿದಾಗ ಎಲ್ಲಾ ನಮ್ಮ ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ಷೇತ್ರದಲ್ಲಿ ಉನ್ನತಿಗೆ ಏರಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದೇ ನಮಗೆ
ತೃಪ್ತಿ.. ಇದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಶಿಕ್ಷಣ ತಜ್ಞ ಡಾ.ಚಂದ್ರಶೇಖರ ದಾಮ್ಲೆ ಅವರ ಮನದಾಳದ ಮಾತು. ಕನ್ನಡ ಮಾಧ್ಯಮಕ್ಕೆ ಕಳಿಸಿ ಯಾಕೆ ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡ್ತಿರಾ ಎಂದು ನಮ್ಮ ಪೋಷಕರನ್ನು ಪ್ರಶ್ನಿಸುತ್ತಿದ್ದವರಿಗೆ ಈ ವಿದ್ಯಾರ್ಥಿಗಳು ಸಾಧನೆಯಿಂದ ಉತ್ತರ ನೀಡಿದ್ದಾರೆ. ನಮ್ಮ ಹಿರಿಯ ವಿದ್ಯಾರ್ಥಿಗಳಲ್ಲಿ ಅನೇಕರು ಎಂಜಿನಿಯರ್ ಆಗಿದ್ದಾರೆ, ಕೆಲವರು ಡಾಕ್ಟರ್, ಮನೋವಿಜ್ಞಾನಿ, ಮಿಲಿಟ್ರಿ, ಗಣಿತಜ್ಞೇ, ಕೃಷಿವಿಜ್ಞಾನಿ, ಕಲಾವಿದ, ನ್ಯಾಯವಾದಿ, ಕೃಷಿಕ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ

ತೊಡಗಿಸಿಕೊಂಡಿದ್ದಾರೆ. ಅನೇಕರು ಇಷ್ಟರಲ್ಲೇ ಸ್ವಂತ ಉದ್ಯಮ ಸ್ಥಾಪಿಸಿ ಬೆರೆಯವರಿಗೂ ಕೆಲಸ ನೀಡಿದ್ದಾರೆ. ಇಲ್ಲಿ ‘ಸ್ನೇಹ ವೃಕ್ಷ’ದಲ್ಲಿರುವವರಲ್ಲದೆ ಇನ್ನೂ ಅನೇಕರು ಮುಂದೆ ಕಾಣಿಸಲಿದ್ದಾರೆ. ಇವರೆಲ್ಲ ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ ಎಂಬ ನನ್ನ ಮಾತನ್ನು ಪುಷ್ಟಿಕರಿಸಿದ್ದಲ್ಲದೆ “ಮುನ್ನಡೆ ಖಚಿತ” ಎಂದು ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ ಡಾ.ದಾಮ್ಲೆ.
ಕಳೆದ ಮೂರು ದಶಕಗಳಿಂದ ಈ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಅನೇಕರು ಸಾಧನೆಯ ಉತ್ತುಂಗಕ್ಕೇರಿದ್ದಾರೆ. ಸ್ನೇಹ ಶಾಲೆ ವಿದ್ಯಾರ್ಥಿಗಳಲ್ಲಿ ಹುದುಗಿರುವ ಶಕ್ತಿಗಳನ್ನು ಚಿಮ್ಮಿಸಿದೆ.ವಿದ್ಯಾರ್ಥಿಗಳ ಸ್ವಯಂ ಸಾಮರ್ಥ್ಯಗಳನ್ನು ಮುದುಡಿಸದೆ ಹೊರಗೆಳೆಯುವುದೇ ನಿಜವಾದ ಶಿಕ್ಷಣ.ಇದು ಸ್ವಾಮಿ ವಿವೇಕಾನಂದರು ನೀಡಿದ ಶಿಕ್ಷಣದ ವ್ಯಾಖ್ಯೆ. ಅದರಂತೆ ತನ್ನಲ್ಲಿಗೆ ಬಂದ ವಿದ್ಯಾರ್ಥಿಗಳಿಗೆ ಸುಂದರ ಸಮೃದ್ಧ ನಿಸರ್ಗದ

ಮಡಿಲಲ್ಲಿ ಮುಕ್ತವಾಗಿ ಓಡಾಡಿ ನೋಡಿ ತಿಳಿದು ಮಾಡಿ ” ಕಲಿವ ಅವಕಾಶ ನೀಡುವ ಶಾಲೆಯೆಂದರೆ ಅದು ಸ್ನೇಹ ಶಾಲೆ ಇಲ್ಲಿನ ವಿದ್ಯಾರ್ಥಿಗಳು ಎತ್ತರಕ್ಕೆ ಏರಿದ್ದಾರೆ ಪ್ರತಿಯೊಬ್ಬರೂ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಪ್ರತಿಯೊಬ್ಬರ ಕಥೆಯಲ್ಲೂ ಒಂದೊಂದೊ ಹೊಸತನ ಮತ್ತು ಅನುರೂಪತೆಯನ್ನು ಕಾಣಬಹುದು.ಅಂತಹಾ ಸಾಧಕರ ಸಾಧಕರ ಪಟ್ಟಿ ಉದ್ದ ಇದೆ. ಸ್ನೇಹದ ವೃಕ್ಷವಾಗಿ ಅದು ಬೆಳೆದಿದೆ. ಸ್ನೇಹದಲ್ಲಿ ಕಲಿತ ಕೃತಿಕಾ ಎಂ.ಸಿ ಕೇರಳದ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ಯುಜಿಸಿ ಸೀನಿಯರ್ ರೀಸರ್ಚ್ ಫೆಲೋ ಆಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಾನು ತೋರಿದ ಸಾಧನೆಗೆ ಸಿಕ್ಕಿದ ಫಲಗಳಿಗೆ, ಈ ಸಾಧನೆಯ ಹಿಂದಿರುವ ಶಕ್ತಿ ಸ್ನೇಹ ಶಾಲೆ. ಈಗ ಹಿಂದಿರುಗಿ ನೋಡಿದಾಗ ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ ಎಂಬ ಡಾ. ಚಂದ್ರಶೇಖರ ದಾಮ್ಮೆಯವರ ಮಾತಿನ ಸತ್ಯದ ಅರಿವಾಗುತ್ತಿದೆ ಎಂದು ಹೇಳುತ್ತಾರೆ ಕೃತಿಕಾ. ಅಕ್ಷರ ದಾಮ್ಲೆ ಶಾಲೆಯ ಮೊದಲ ವಿದ್ಯಾರ್ಥಿಗಳಲ್ಲಿ ಓರ್ವರು. ಮನೋವಿಜ್ಞಾನಿಯಾಗಿ ಬೆಂಗಳೂರಿನಲ್ಲಿ ಮನೋಸಂವಾದ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮಾನಸಿಕ ಒತ್ತಡ ನಿವಾರಣೆಗೆ ಚಿಕಿತ್ಸೆ ನೀಡುತ್ತಿರುವ ಇವರು ಟೆಡೆಕ್ಸ್ ಸ್ಪೀಕರ್ ಆಗಿದ್ದಾರೆ.

ಡಾ.ಚಂದ್ರಶೇಖರ ದಾಮ್ಲೆ
ಇವರು ಕನ್ನಡವಲ್ಲದೆ ಇಂಗ್ಲಿಷ್ನಲ್ಲೂ ಹಿಂದಿಯಲ್ಲೂ ಕೌನ್ಸೆಲಿಂಗ್ ಮಾಡಬಲ್ಲವರು. ಅಲ್ಲದೆ ಬೆಂಗಳೂರಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿಗೆ ತರಬೇತುದಾರರಾಗಿ ಹೋಗುತ್ತಿದ್ದಾರೆ. ರಜನೀಶ್ ಲೈನ್ಕಜೆ ಈಗ ಸೈನ್ಯದಲ್ಲಿ ಮೇಜರ್ ಆಗಿ ಉನ್ನತ ಹುದ್ದೆಯಲ್ಲಿದ್ದಾರೆ.
ಮರ್ಕಂಜದ ಚಿನ್ಮಯ ಜಲಸಂಸ್ಕರಣೆಯ ಒಂದು
ಕಂಪನಿಯನ್ನೇ ಸ್ಥಾಪಿಸಿದ್ದಾರೆ. ಹೈಡ್ರೋಲಿಕ್ ಇಂಜಿನಿಯರಿಂಗ್ ಮಾಡಿ ಮಂಗಳೂರಿನ ಎಂಸಿಎಫ್ನಲ್ಲಿ ಉದ್ಯೋಗಿಯಾಗಿದ್ದವರು ಅದನ್ನು ಬಿಟ್ಟು ಈಗ ತನ್ನ ಕಂಪನಿಯಲ್ಲಿ ಅನೇಕರಿಗೆ ಉದ್ಯೋಗ ನೀಡಿದ್ದಾರೆ. ಕಳೆಂಜದ ನೆಟ್ಟಾರು ವಿನೋದ ವೆಲ್ತ್ ಕನ್ಸಲ್ಟೆಂಟ್ ಆಗಿ ಸ್ಪೋದ್ಯೋಗಿಯಾಗಿ ಯಶಸ್ಸು ಕಾಣುತ್ತಿದ್ದಾರೆ. ಧನುಷ್ ಜಿ. ಎಸ್. ಸ್ನೇಹ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಪಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಶಿಕ್ಷಣ ಮುಗಿಸಿ ಪ್ರಸ್ತುತ ಭಾರತದ ಪ್ರತಿಷ್ಠಿತ ಸಂಸ್ಥೆಯಿಂದ ಬೆಂಗಳೂರಿನ ಬಯೋಕಾನ್ನಲ್ಲಿ ಉದ್ಯೋಗಿಯಾಗಿದ್ದಾರೆ.

ಸ್ನೇಹದಲ್ಲಿ ಕಲಿತ ಯು. ಸು.ಮನ್ವಿತ್ ಡಿಸೈನ್ ಇಂಜಿನಿಯರಿಂಗ್ ಕಲಿಯಲು ದೇಶವ್ಯಾಪಿಯಾಗಿ ನಡೆಯುವ ಸ್ಪರ್ಧೆಯಲ್ಲಿ 15 ಮಂದಿಯಲ್ಲಿ ಒಬ್ಬನಾಗಿ ಆಯ್ಕೆಯಾಗಿ ಶಿಕ್ಷಣ ಪೂರೈಸಿರುವ ಮನ್ವಿತ್ ಕೂಡ ಪೂರ್ಣ ಶಿಕ್ಷಣಕ್ಕೆ ಸ್ಕಾಲರ್ಶಿಪ್ ಪಡೆದು ಕಲಿಕೆಯಲ್ಲಿ ಛಾಪು ಮೂಡಿಸಿದ ಇಂಜಿನಿಯರ್. ಇಂದು ಅಂತಾರಾಷ್ಟ್ರೀಯ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಜಾಲ್ಲೂರಿನ ಸಮೀಪದ ಪೆರುಂಬಾರಿನ ಅನೀಶ ಸಿಎ ಪರೀಕ್ಷೆಯನ್ನು ತೇರ್ಗಡೆಯಾಗಿ ಪುತ್ತೂರು, ಸುರತ್ಕಲ್
ಹಾಗೂ ಬೆಂಗಳೂರಿನಲ್ಲಿ ತನ್ನ ಕಂಪನಿಯ ಶಾಖೆಗಳನ್ನು ತೆರೆದಿದ್ದಾರೆ. ಸುಳ್ಯದ ಡಾ.ಸುದೀಪ್ ದಂತ ವೈದ್ಯಕೀಯದಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದಾರೆ. ಪದವಿ ಶಿಕ್ಷಣದಲ್ಲಿ ಮಂಗಳೂರು ಯುನಿವರ್ಸಿಟಿ ಮಟ್ಟದಲ್ಲಿ ರ್ಯಾಂಕ್ ಪಡೆದ ಅನು ಡಿ. (ಬಿ.ಎಸ್ಸಿ ಯಲ್ಲಿ 4ನೇ ರ್ಯಾಂಕ್), ಸುಮಾ ವೈ (ಎಲ್ಎಲ್ಬಿ ಯಲ್ಲಿ 10ನೇ ರ್ಯಾಂಕ್), ಅನಂತ ಭಟ್ (ಕಂಪ್ಯೂಟರ್ ಸೈನ್ಸ್ ನಲ್ಲಿ ಮೊದಲ ರ್ಯಾಂಕ್) ಗಳಿಸಿದ್ದರ ಹಿಂದೆ ಸ್ನೇಹ ಶಾಲೆಯಲ್ಲಿ ಬೆಳೆದ ಬಲ ಸಿಕ್ಕಿದೆ. ಮಣಿಪಾಲ ಯುನಿವರ್ಸಿಟಿಯಲ್ಲಿ ಪಿಹೆಚ್ಡಿ ಪದವಿಗಳಿಸಿದ ಡಾ. ಪ್ರಜ್ಞಾ ನೆಕ್ರಾಜೆ, ಫಿಶರೀಸ್ ವಿಶ್ವವಿದ್ಯಾಲಯದಲ್ಲಿ ವಿಶಿಷ್ಟ ಬಹುಮಾನ ಗಳಿಸಿದ ಅನನ್ಯ ಗೌಡ ಕತಾರ್ನಲ್ಲಿ ನೃತ್ಯ ಮತ್ತು ಸಂಗೀತಗಳನ್ನು ಆನ್ಲೈನ್ನಲ್ಲಿ ಕಲಿಸಿ ಉತ್ತಮ ಖ್ಯಾತಿ ಪಡೆದ ಲಾವಣ್ಯ ಆಚಾರ್ ಹೀಗೆ ಸ್ನೇಹ ಶಾಲೆಯಿಂದ ಮುಂದಡಿ ಇಟ್ಟ ಅನೇಕ ಸಾಧಕರಿದ್ದಾರೆ.ಅವರಿಗೆ ಇಂಗ್ಲಿಷ್ ಒಂದು ಸಮಸ್ಯೆ ಆಗಲೇ ಇಲ್ಲ.

ಸ್ನೇಹ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಸಮೀಪದ ಪಿ ಯು ಕಾಲೇಜುಗಳಲ್ಲಿ, ವಿಶಿಷ್ಟ ಸ್ವಾಗತವಿದೆ. ಅದಕ್ಕೆ ಕಾರಣ ಇಲ್ಲಿನ ವಿದ್ಯಾರ್ಥಿಗಳ ಮಾನಸಿಕ ಧೈರ್ಯ, ಸಂವಹನ ಸಾಮರ್ಥ್ಯ ಹಾಗೂ ಅಧ್ಯಯನಶೀಲತೆಗಳು, ಅವರ ಪಾಠೇತರ ಚಟುವಟಿಕೆಗಳು ಇತರ ಶಾಲೆಗಳ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿ ಗುರುತಿಸಲು ಕಾರಣವಾಗಿವೆ.
ಸ್ನೇಹ ಶಾಲೆ ಎಂದರೆ ಅದು ಕೇವಲ ತರಗತಿಗಳ ಕೊಠಡಿ ಗಳಷ್ಟೇ ಅಲ್ಲ. ಕಲಾ ಶಾಲೆ, ಬರಹದ ಮನೆ, ಬಯಲು ಸೂರ್ಯಾಲಯ, ಔಷಧೀಯ ಸಸ್ಯಗಳ ವನ, ಸಹಜ ಅರಣ್ಯದಲ್ಲಿ ಮುಕ್ತ ತರಗತಿ, ವಿಜ್ಞಾನ ಉದ್ಯಾನ, ಬಯಲು ರಂಗಮಂದಿರ, ಭಾರತಮಾತೆಯ 3ಡಿ ನಕ್ಷೆ, ಸಭಾಭವನ, ಟಿಂಕರಿಂಗ್ ಲ್ಯಾಬ್, ದೃಶ್ಯ ಶ್ರವಣ ಮಾಧ್ಯಮ ಕೇಂದ್ರ, ದೊಡ್ಡ ದೊಡ್ಡ ಮರಗಳ ನೆರಳಿನ ಚಿತ್ತಾರ ಹೀಗೆ ಅನೇಕ ಕಲಿಕಾ ಸೌಲಭ್ಯಗಳಿವೆ. ಇಲ್ಲಿ

ಸ್ನೇಹ ಶಾಲೆಯ ಸಸ್ಯ ವನದಲ್ಲಿ ಡಾ.ದಾಮ್ಲೆ
ಪ್ರತಿವರ್ಷವು ಏನಾದರೊಂದು ಹೊಸತನ್ನು ದಾಮ್ಮೆ ನಿರ್ಮಿಸುತ್ತಿರುತ್ತಾರೆ.
ಸ್ನೇಹ ಶಾಲೆಯು ವಿದ್ಯಾರ್ಥಿಗಳಲ್ಲಿ ಹುದುಗಿರುವ – ಅಂತಃಶಕ್ತಿಯನ್ನು ಹೊರಗೆ ತರುವಲ್ಲಿ ಸಫಲವಾಗುತ್ತಿದೆ.ಅದರ ಸೂತ್ರಧಾರರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ಸ್ವತಃ ಶಿಕ್ಷಣ ತಜ್ಞರಾಗಿದ್ದು ಇಲ್ಲಿಗೆ – ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಬೌದ್ಧಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ.ಈ ಶಾಲೆಯ ಆಡಳಿತ ಮಂಡಳಿಯಲ್ಲಿ ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್, ಪುತ್ತೂರಿನ ಮಾಸ್ಟರ್ ಪ್ಲಾನರಿಯ ಎಸ್. ಕೆ. ಆನಂದ ಕುಮಾರ್, ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ವಿದ್ಯಾಶಾಂಭವ ಪಾರೆ, ಮಂಗಳೂರಿನ ಉದ್ಯಮಿ, ಶ್ರೀಕರ ದಾಮ್ಲ ರೇಖಾ ಆನಂದ್ ಇವರು ಇದ್ದಾರೆ. ಇನ್ನು, ಶಾಲಾ ಮುಖ್ಯೋಪಾಧ್ಯಾಯಿನಿಯಾಗಿ ಆರಂಭದಿಂದಲೂ ತೊಡಗಿಸಿಕೊಂಡಿರುವ

ಜಯಲಕ್ಷ್ಮಿ ಶಾಲೆಯನ್ನು ಮುನ್ನಡೆಸುತ್ತಾರೆ. ಮಕ್ಕಳಲ್ಲಿ ಓದು, ಬರಹ, ಮಾತು, ಕೃತಿ ಮತ್ತು ಚಿಂತನೆಯಲ್ಲಿ ಸ್ಪಷ್ಟತೆ ಇರುವಂತೆ ನೋಡುವ ಸ್ನೇಹ ಶಾಲೆಯಲ್ಲಿ ಶಿಕ್ಷಣಕ್ಕೆ ಸೃಜನಶೀಲತೆಯ ಸ್ಪರ್ಶ ನೀಡುತ್ತಾರೆ. ಸಹಕಾರ, ಸೇವೆ, ಉಳಿತಾಯ, ಪ್ರಾಮಾಣಿಕತೆ, ಸೃಜನಶೀಲತೆ, ಅಧ್ಯಯನಶೀಲತೆ ಮುಂತಾದ ಮೌಲ್ಯಗಳನ್ನು ಕಲಿಸಲಾಗುತ್ತದೆ.
ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣವನ್ನೇ ಗುರಿಯಾಗಿರಿಸಿಕೊಂಡ
ಸ್ನೇಹ ಶಿಕ್ಷಣ ಸಂಸ್ಥೆಯು ಸಾರ್ಥಕ 29ನೇ ವರ್ಷಕ್ಕೆ ಕಾಲಿಟ್ಟಿದೆ. ಮುಂದಿನ ವರ್ಷ ತೃಂಶತಿ ಆಚರಿಸಲು ಅಣಿಯಾಗುತಿದೆ.
(ಲೇಖನ ಮಾಹಿತಿ:ಸ್ನೇಹ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳು)