ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬಂಧಿಸಿದಂತೆ ಭರ್ತಿ ಮಾಡಿರುವ ಗಣತಿ ನಮೂನೆಗಳನ್ನು ಸಲ್ಲಿಸುವ ಅವಧಿಯನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದೆ.ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)-2026ರ ಕಾರ್ಯ ಪ್ರಗತಿಯಲ್ಲಿದ್ದು, ಪರಿಷ್ಕೃತ
ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಂತೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ ಮನೆಗೆ ಭೇಟಿ ಹಾಗೂ ದಾಖಲೆ ಸಂಗ್ರಹಿಸುವ ಕಾರ್ಯ ಜೂನ್ 30ರಂದು ಆರಂಭವಾಗಿದ್ದು, ಆಗಸ್ಟ್ 17ರವರೆಗೆ ನಡೆಯಲಿದೆ. ಈ ಹಿಂದೆ ಆಗಸ್ಟ್ 8ರವರೆಗೆ ಅವಕಾಶ ನೀಡಲಾಗಿತ್ತು.
ಪರಿಷ್ಕೃತ ವೇಳಾಪಟ್ಟಿಯಂತೆ, ಮತಗಟ್ಟೆಗಳ ಮರುಜೋಡಣೆ ಹಾಗೂ ಮರುಹೊಂದಾಣಿಕೆ ಕಾರ್ಯವನ್ನು ಆಗಸ್ಟ್ 17ರಂದು ಪೂರ್ಣಗೊಳಿಸಲಾಗುವುದುಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲಾಗುತ್ತದೆ.
ಇದಾದ ಬಳಿಕ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿಯನ್ನು ಆಗಸ್ಟ್ 24ರಿಂದ ಅಕ್ಟೋಬರ್ 22ರವರೆಗೆ ನಡೆಸಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.












