ನಾಗೋಯಾ: ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತ ಮತ್ತೊಂದು ಪದಕ ಗೆದ್ದಿದೆ.
ಸೋಮವಾರ ಭಾರತೀಯ ತಂಡವು ತನ್ನ ಪದಕಗಳ ಪಟ್ಟಿಗೆ ಮತ್ತೊಂದು ಬೆಳ್ಳಿ ಪದಕವನ್ನು ಸೇರಿಸಿದೆ. ಹಿಮಾಂಶು ಧಿಲ್ಲೋನ್, ಪಾರ್ಥ್ ಮಾನೆ ಮತ್ತು ರುದ್ರಾಂಕ್ಷ್ ಪಾಟೀಲ್ ಅವರನ್ನೊಳಗೊಂಡ ತಂಡವು
ಪುರುಷರ 10 ಮೀಟರ್ ಏರ್ ರೈಫಲ್ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಭಾರತದ ಪದಕಗಳ ಸಂಖ್ಯೆಯನ್ನು 3ಕ್ಕೆ ಹೆಚ್ಚಿಸಿದೆ.ಏಷ್ಯನ್ ಗೇಮ್ಸ್ನ ಶೂಟಿಂಗ್ನಲ್ಲಿ ಭಾರತ ಮೂರನೇ ಪದಕ ಇದಾಗಿದೆ. ಇಳವೆನಿಲ್ ವಾಳರಿವನ್ ಅವರು ಮೊದಲ ದಿನ 10 ಮೀ. ಏರ್ ರೈಫಲ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದರು. ಅವರ ಉತ್ತಮ ಪ್ರದರ್ಶನದ ನೆರವಿನಿಂದ ಭಾರತ ತಂಡ ವಿಭಾಗದಲ್ಲೂ ಬೆಳ್ಳಿ ಗೆದ್ದುಕೊಂಡಿತು.
27 ವರ್ಷ ವಯಸ್ಸಿನ ಇಳವೆನಿಲ್, ವೈಯಕ್ತಿಕ ವಿಭಾಗದಲ್ಲಿ ಮೊದಲ ಗುರಿಯಿಂದಲೇ ಮುನ್ನಡೆ ಸಾಧಿಸಿದ್ದು, ಎರಡನೇ ಸ್ಥಾನಕ್ಕಾಗಿ ಜಪಾನ್ನ ಮಿಸಾಕಿ ನೊಬೊತಾ ಮತ್ತು ದಕ್ಷಿಣ ಕೊರಿಯಾದ ಹ್ಯುಜಿನ್ ಬಾನ್ ನಡುವೆ ಆರಂಭದಲ್ಲಿ ಪೈಪೋಟಿ ಜೋರಾಗಿತ್ತು. 21ನೇ ಗುರಿಯವರೆಗೆ ತಮಿಳುನಾಡಿನ ಶೂಟರ್ ಅಗ್ರಸ್ಥಾನ ಕಾಪಾಡಿಕೊಂಡಿದ್ದರು.
ಆದರೆ ಕೊನೆಯ ಮೂರು ಗುರಿಯಲ್ಲಿ ಅಂಕ ಕಡಿಮೆಯಾದ ಕಾರಣ ಕೂದಲೆಳೆ ಅಂತರದಲ್ಲಿ ಚಿನ್ನದ ಪದಕ ನಷ್ಟವಾಯಿತು.
ತಂಡ ವಿಭಾಗದಲ್ಲಿ ಇಳವೆನಿಲ್ ಸೋನಮ್ ಉತ್ತಮ್ ಮಸ್ಕರ್, ವಿದರ್ಸಾ ಕೆ.ವಿನೋದ್ ಜೊತೆಗೂಡಿ ಮತ್ತೊಂದು ಬೆಳ್ಳಿ ಗೆಲ್ಲುವಲ್ಲಿ ಪಾತ್ರ ವಹಿಸಿದರು.ಇದೇ ವೇಳೆ, ಮಹಿಳಾ ತಂಡದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಪಾಕಿಸ್ತಾನದ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಭಾರತೀಯ ತಂಡವು ತನ್ನ ಪ್ರಾಬಲ್ಯವನ್ನು ಮೆರೆದಿದೆ. ಮಿಶ್ರ ಸಮರ ಕಲೆ ಮತ್ತು ಮಹಿಳಾ ಕ್ರಿಕೆಟ್ನಲ್ಲಿ ಪದಕಗಳನ್ನು ಖಚಿತ ಪಡಿಸಿದೆ.








