ಸುಳ್ಯ: ಬೇಸಿಗೆ ರಜೆ ಮುಗಿದು ರಾಜ್ಯಾದ್ಯಂತ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು 29ರಿಂದ ಪುನಾರಂಭಗೊಳ್ಳುತ್ತಿವೆ. ಮೊದಲ ಎರಡು ದಿನ ಶಾಲೆಗಳ ಸ್ವಚ್ಚತಾ ಕಾರ್ಯ ಮತ್ತಿತರ ಸಿದ್ಧತೆ ನಡೆಯಲಿದ್ದು, ಮೇ 31ರಂದು ‘ಶಾಲಾ ಪ್ರಾರಂಭೋತ್ಸವ’ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆಯು ಎಲ್ಲ ಶಾಲೆಗಳಿಗೆ ಸೂಚನೆ ನೀಡಿದೆ. 29ರಿಂದ ಶಾಲಾ ಶಿಕ್ಷಕರು ಶಾಲೆಗೆ ಬರಬೇಕು. 31ರಿಂದ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬೇಕು. ಎರಡು ದಿನ
ಶಾಲಾ ಸ್ವಚ್ಛತಾ ಕಾರ್ಯ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು. ತರಗತಿ, ಸಿಬ್ಬಂದಿ ಕೊಠಡಿ, ಶಾಲಾ ಮೈದಾನ, ನೀರಿನ ಟ್ಯಾಂಕ್, ಅಡುಗೆ ಕೋಣೆ, ಆಹಾರ ಧಾನ್ಯಗಳ ಸ್ವಚ್ಛತೆ ಮತ್ತು ಅಡುಗೆ ಪರಿಕರಗಳನ್ನು ಸ್ವಚ್ಛಗೊಳಿಸುವಂತೆ ತಿಳಿಸಲಾಗಿದೆ.
ಮೇ 29ರಂದು ಶಿಕ್ಷಕರು ವರ್ಷದ ಶೈಕ್ಷಣಿಕ ಚಟುವಟಿಕೆಗಳ ಕುರಿತು ಶಾಲಾ, ತರಗತಿ, ಶಿಕ್ಷಕರ ವೇಳಾಪಟ್ಟಿ, ವಾರ್ಷಿಕ ಕ್ರಿಯಾ ಯೋಜನೆ, ಶಿಕ್ಷಕರು ಪಾಠ ಯೋಜನೆ ತಯಾರಿಸಿಕೊಳ್ಳುವುದು. ಶಾಲಾಭಿವೃದ್ಧಿ ಯೋಜನೆ, ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಿ ವಿಶೇಷ ದಾಖಲಾತಿ ಮಾಡಿಕೊಳ್ಳಲು ಜಾಥಾ, ಮನೆ ಭೇಟಿ ಮುಂತಾದ ಕ್ರಮಗಳನ್ನು ಹಮ್ಮಿಕೊಳ್ಳುವುದು.
ಮೇ 31ರಂದು ಮಕ್ಕಳಿಗೆ ಸಿಹಿ ವಿತರಿಸಿ ಪ್ರಾರಂಭೋತ್ಸವ ಮಾಡಬೇಕು. ಶಾಲಾರಂಭದ ದಿನವೇ ಉಚಿತ ಪಠ್ಯಪುಸ್ತಕ ಮತ್ತು ಸಮವಸಗಳನ್ನು ವಿತರಿಸಬೇಕು. ಶಾಲೆಗಳಿಗೆ ಸಮವಸ್ತ್ರ, ಪುಸ್ತಕಗಳನ್ನು ವಿತರಿಸಲಾಗುತ್ತಿದ್ದು ಶಾಲಾ ಪ್ರಾರಂಭೋತ್ಸವದ ದಿನ ಮಕ್ಕಳಿಗೆ ವಿತರಿಸಲಾಗುತ್ತದೆ.
ಸುಳ್ಯ ತಾಲೂಕಿನ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢ ಶಾಲೆ ಮತ್ತು ಮೊರಾರ್ಜಿ ಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಶಾಲೆಗಳ ಪುನರಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. 31ರಂದು ಎಲ್ಲಾ ಶಾಲೆಗಳಲ್ಲಿ ಪ್ರಾರಂಭೋತ್ಸವ ನಡೆಯಲಿದೆ. ತಳಿರು, ತೋರಣಗಳನ್ನು ಕಟ್ಟಿ ಶಾಲೆಗಳನ್ನು ಶೃಂಗರಿಸಲಾಗುವುದು. ಮಕ್ಕಳಗೆ ಸಿಹಿ ಹಂಚಿ ಸಂಭ್ರಮ ಸಡಗರದಿಂರ ಸ್ವಾಗತಿಸಲಾಗುವುದು ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ. ತಿಳಿಸಿದ್ದಾರೆ.
ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ 31ರಂದು ಎಲಿಮಲೆಯಲ್ಲಿ ನಡೆಯಲಿದೆ. ಸರಕಾರಿ ಪ್ರೌಢ ಶಾಲೆ ಎಲಿಮಲೆ, ಸರಕಾ ಹಿರಿಯ ಪ್ರಾಥಮಿಕ ಶಾಲೆ ದೇಚಚಳ್ಳ ಹಾಗೂ ಜ್ಞಾನದೀಪ ಶಾಲೆ ಎಲಿಮಲೆ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.