ಶಬರಿಮಲೆ: ಇನ್ನು ಎರಡು ತಿಂಗಳ ಕಾಲ ಶರಣ ಘೋಷಗಳು ಮೊಳಗುವ ಭಕ್ತಿಯ ದಿನಗಳು. ಮಂಡಲ-ಮಕರ ವಿಳಕ್ಕು ತೀರ್ಥಯಾತ್ರೆಗಾಗಿ ಪ್ರಸಿದ್ಧ ಪುಣ್ಯ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲು ನ.16ರಂದು ಸಂಜೆ ತೆರೆಯಲಾಯಿತು. ಕ್ಷೇತ್ರದ ತಂತ್ರಿ ಕಂಠರರ್ ರಾಜೀವರ್ ಅವರ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕರಾದ ಎನ್.ಪರಮೇಶ್ವರನ್ ನಂಬೂತಿರಿ ಕ್ಷೇತ್ರದ ಗರ್ಭಗುಡಿಯ
ಬಾಗಿಲನ್ನು ತೆರೆದರು. ಬಳಿಕ ನೂತನ ಶಬರಿಮಲೆ ಪ್ರಧಾನ ಅರ್ಚಕರಾದ ಕೆ.ಜಯರಾಮನ್ ನಂಬೂತಿರಿ ಮತ್ತು ಮಾಳಿಕಪ್ಪುರಂ ಪ್ರಧಾನ ಅರ್ಚಕ ಹರಿಹರನ್ ನಂಬೂತಿರಿ ಅವರನ್ನು ಸ್ವಾಗತಿಸಲಾಯಿತು. ಆರಂಭದ ದಿನವೇ ಶಬರಿಮಲೆ ಸನ್ನಿಧಾನಕ್ಕೆ ಭಕ್ತರ ಪ್ರವಾಹವೇ ಹರಿದು ಬಂದಿದೆ. ನ.17ರಂದು ವೃಶ್ಚಿಕ ಮಾಸದ ಮೊದಲ ದಿನ ಮುಂಜಾನೆ ನಾಲ್ಕು ಗಂಟೆಗೆ ನೂತನ ಶಬರಿಮಲೆ ಪ್ರಧಾನ ಅರ್ಚಕರಾದ ಕೆ.ಜಯರಾಮನ್ ನಂಬೂತಿರಿ ಗರ್ಭಗುಡಿಯ ಬಾಗಿಲು ತೆರೆಯುವರು. ಗುರುವಾರದಿಂದ ಎರಡು ತಿಂಗಳ ಅವಧಿಗೆ ಮಂಡಲ,ಮಕರ ವಿಳುಕ್ಕು ತೀರ್ಥಯಾತ್ರೆ ಆರಂಭಗೊಳ್ಳಲಿದೆ. 41 ದಿನಗಳ ಮಂಡಲ ವಿಳಕ್ಕು ಪೂಜಾ ವಿಧಿಗಳು ಡಿ. 27ಕ್ಕೆ ಮುಕ್ತಾಯವಾಗಲಿದೆ. ನಂತರ ಮೂರು ದಿನಗಳ ಕಾಲ ದೇಗುಲದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ.ಡಿ 30ರಿಂದ ಮಕರವಿಳುಕ್ಕು ಯಾತ್ರೆಗಾಗಿ ದೇಗುಲವನ್ನು ಮತ್ತೆ ತೆರೆಯಲಾಗುವುದು. ಜನವರಿ 14ರಂದು ಮಕರವಿಳಕ್ಕು, ಮಕರ ಜ್ಯೋತಿಯ ದರ್ಶನ, ಮತ್ತಿತರರ ಪೂಜಾ ವಿಧಿಗಳು ನಡೆದು ಜನವರಿ 20ರಂದು ದೇಗುಲದ ಬಾಗಿಲು ಮುಚ್ಚಲಾಗುವುದು. ಅಲ್ಲಿಗೆ ಈ ವರ್ಷದ ಶಬರಿಮಲೆ ಯಾತ್ರೆ ಸಮಾಪನಗೊಳ್ಳಲಿದೆ.