ಮುಲ್ಲನಪುರ: ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಡಿಸಿದ ಅಮೋಘ ಅರ್ಧಶತಕ ಹಾಗು ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 47 ರನ್ಗಳ ಅಂತರದಿಂದ ಮಣಿಸಿ ಎರಡನೇ
ಕ್ವಾಲಿಫಯರ್ ಪಂದ್ಯ ಆಡಲು ಅರ್ಹತೆ ಪಡೆದಿದೆ.ಎರಡನೇ ಕ್ವಾಲಿಫಯರ್ನಲ್ಲಿ ರಾಜಸ್ಥಾನ್ ರಾಯಲ್ಸ್ ಮೇ.29ರಂದು ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.ಎಸ್ಆರ್ಎಚ್ ಟೂರ್ನಿಯಿಂದ ಹೊರ ಬಿದ್ದಿದೆ.ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ಸ್, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 243 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಹೈದ್ರಾಬಾದ್ 19.2ಓವರ್ಗಳಲ್ಲಿ ರನ್ 196 ರನ್ಗೆ ಆಲ್ ಔಟ್ ಆಯಿತು. ಸನ್ ರೈಸರ್ಸ್ ಆರಂಭಿಕ ಆಘಾತಕ್ಕೆ ಒಳಗಾಯಿತು. ಸ್ಫೋಟಕ ಶೈಲಿಯ ಬ್ಯಾಟರ್ ಅಭಿಷೇಕ್ ಶರ್ಮಾ ಇನಿಂಗ್ಸ್ನ ಎರಡನೇ ಎಸೆತದಲ್ಲೇ ಸೊನ್ನೆ ಸುತ್ತಿದರು. ಇಶಾನ್ ಕಿಶನ್ (33),ಟ್ರಾವಿಸ್ ಹೆಡ್ (17) ಹೆನ್ರಿಚ್ ಕ್ಲಾಸೆನ್(18), ನಿತೀಶ್ ಕುಮಾರ್ ರೆಡ್ಡಿ(38), ಸಲಿಲ್ ಅರೋರ(35) ಶಿವಾಂಗ್ ಕುಮಾರ್(27)ರನ್ ಗಳಿಸಿದರು. ರಾಜಸ್ಥಾನ್ ಪರ
ಜೋಪ್ರಾ ಆರ್ಚರ್ 3 ವಿಕೆಟ್ ಪಡೆದರು.ಮೊದಲು ಬ್ಯಾಟ್ ಮಾಡಿದ ರಾಯಲ್ಸ್ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರು.
ಆರಂಭದಿಂದಲೇ ಲೀಲಾಜಾಲವಾಗಿ ಬ್ಯಾಟ್ ಬೀಸಿದ ವೈಭವ್, ರೈಸರ್ಸ್ ಪಡೆಯ ಬೌಲರ್ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದರು.
ವೈಭವ್ ಮತ್ತು ಜೈಸ್ವಾಲ್ ಜೋಡಿ ಮೊದಲ ವಿಕೆಟ್ಗೆ ಕೇವಲ 8 ಓವರ್ಗಳಲ್ಲೇ 125 ರನ್ ಕೂಡಿಸಿತು. ಇದರಲ್ಲಿ ವೈಭವ್ ಪಾಲು 97 ರನ್. ಕೇವಲ 29 ಎಸೆತ ಎದುರಿಸಿದ ಈ ಆಟಗಾರ, 12 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಸಿ ಔಟಾದರು. ಅದರೊಂದಿಗೆ, ವೇಗದ ಶತಕ ಸಿಡಿಸುವ
ಅವಕಾಶವನ್ನು ಕಳೆದುಕೊಂಡರು.ಅವರ ಹಿಂದೆಯೇ ಜೈಸ್ವಾಲ್ (29 ರನ್) ಕೂಡ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ದ್ರುವ ಜುರೇಲ್ (21 ಎಸೆತ, 51 ರನ್) ಮತ್ತು ನಾಯಕ ರಿಯಾನ್ ಪರಾಗ್ (12 ಎಸೆತ, 26 ರನ್) ಬೀಸಾಟಕ್ಕೆ ಒತ್ತು ನೀಡಿದರು. 15 ಓವರ್ ಆಗುವಷ್ಟರಲ್ಲೇ ತಂಡದ ಮೊತ್ತ 3 ವಿಕೆಟ್ಗೆ 207ಕ್ಕೆ ತಲುಪಿತು. ಆದರೆ, ಕೊನೇ ಐದು ಓವರ್ಗಳಲ್ಲಿ ಮೇಲುಗೈ ಸಾಧಿಸಿದ ರೈಸರ್ಸ್, ಕೇವಲ 36 ರನ್ ನೀಡಿ ಐದು ವಿಕೆಟ್ಗಳನ್ನು ಪಡೆದರು. ಹೀಗಾಗಿ, ರಾಯಲ್ಸ್ ಮೊತ್ತ 250ರ ಗಡಿ ದಾಟದಂತೆ ನೋಡಿಕೊಂಡರು.
ಪ್ರಫುಲ್ ಹಿಂಗೆ ಮೂರು ವಿಕೆಟ್ ಪಡೆದರು.















