ಸುಳ್ಯ:ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕಿ ರತ್ನಾವತಿ ಡಿ, ಸುಧೀರ್ಘ 34 ವರ್ಷಗಳ ಸೇವೆಯನ್ನು ಸಲ್ಲಿಸಿ ಮೇ 30ರಂದು ಸೇವಾ ನಿವೃತ್ತಿ ಪಡೆದರು. ಕಾಲೇಜಿನ ಶಿಕ್ಷಕ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ತಮ್ಮ ವೃತ್ತಿಜೀವನವನ್ನು
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮಡಿಕೇರಿ ಹಾಗೂ ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜು ಪೆರ್ನಾಜೆಯಲ್ಲಿ ಆರಂಭಿಸಿ 1992ರಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕಿಯಾಗಿ ಆಯ್ಕೆಗೊಂಡರು. 2010ರಿಂದ 2013ರ ತನಕ 3 ವರ್ಷಗಳ ಕಾಲ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಕಾಲೇಜಿನ ವಿವಿಧ ಘಟಕಗಳಾದ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಚಾಲಕರಾಗಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿಯೂ ಕೂಡ ಸೇವೆಯನ್ನು ಸಲ್ಲಿಸಿದ್ದಾರೆ.
ಇವರ ಪತಿ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಉದ್ಯೋಗಿಯಾಗಿರುವ ಶಿವರಾಮ ಕೇರ್ಪಳ ಹಾಗೂ ಪುತ್ರಿಯರು ಡಾ. ಮೇಘಶ್ರೀ ಕೆ ಮತ್ತು ಡಾ. ಮಧುಶ್ರೀ ಕೆ.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರದ ಡಾ. ರುದ್ರ ಕುಮಾರ್ ಎಂ.ಎಂ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು, ಐ.ಕ್ಯೂ.ಎ.ಸಿ ಸಂಚಾಲಕಿ ಡಾ. ಮಮತ ಕೆ, ಸ್ಟಾಫ್ ಕ್ಲಬ್ ಕಾರ್ಯದರ್ಶಿ ದಿವ್ಯ ಟಿ.ಎಸ್ ಉಪಸ್ಥಿತರಿದ್ದರು.














