ಸುಳ್ಯ:ಪ್ರಕೃತಿಯ ಸೊಬಗು, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಬದುಕಿನ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ವತಿಯಿಂದ’ನಿಸರ್ಗೋತ್ಸವ–2026′ ಕಾಂತಮಂಗಲದ ಗದ್ದೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಮುಖ್ಯ ಅತಿಥಿ ಮನಮೋಹನ ಪುತ್ತಿಲ ಉದ್ಘಾಟಿಸಿದರು.ಪ್ರಕೃತಿ ಮತ್ತು ಕೃಷಿ ನಮ್ಮ ಬದುಕಿನ
ಅವಿಭಾಜ್ಯ ಅಂಗಗಳಾಗಿದ್ದು, ಇಂತಹ ನಿಸರ್ಗೋತ್ಸವಗಳು ಯುವಜನರಲ್ಲಿ ಪರಿಸರದ ಬಗ್ಗೆ ಕಾಳಜಿ, ಕೃಷಿಯ ಬಗ್ಗೆ ಗೌರವ ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನವನ್ನು ಬೆಳೆಸುತ್ತವೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋಧಾ ರಾಮಚಂದ್ರ ಮಾತಬಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪ್ರಕೃತಿಯೊಂದಿಗೆ ನಂಟು ಬೆಳೆಸಿಕೊಳ್ಳುವುದು, ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಅರಿತುಕೊಳ್ಳುವುದು ಹಾಗೂ ಕೃಷಿ ಪರಂಪರೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವೆಂದು ಹೇಳಿದರು.ಕಾರ್ಯಕ್ರಮದ ಅಂಗವಾಗಿ

ನಿಸರ್ಗ ಮತ್ತು ಗ್ರಾಮೀಣ ಜೀವನವನ್ನು ಪ್ರತಿಬಿಂಬಿಸುವ ವಿವಿಧ ಚಟುವಟಿಕೆಗಳು ಹಾಗೂ ಕೆಸರುಗದ್ದೆ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ, ಕ್ರೀಡಾ ಮನೋಭಾವ ಮತ್ತು ತಂಡದ ಸಾಮರಸ್ಯವನ್ನು ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ದೀಪಕ್ ವೈ ಆರ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಉಪನ್ಯಾಸಕಿ ಮಲ್ಲಿಕಾ ಎಂ.ಎಲ್., ವಿದ್ಯಾರ್ಥಿನಿಯರಾದ ಪುಣ್ಯಶ್ರೀ , ರಕ್ಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಸೊಹನಿ ಸ್ವಾಗತಿಸಿ, ರಿಷಿತಾ ವಂದಿಸಿದರು.








