ಸುಳ್ಯ: ಕೆಪಿಸಿಸಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಬದ್ಧನಾಗಿದ್ದೇನೆ ಮತ್ತು ಕೆಪಿಸಿಸಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನೂ ಸ್ವಾಗತಿಸುತ್ತೇನೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗೆ ಕೆಪಿಸಿಸಿ ಅಧ್ಯಕ್ಷರು ತಾತ್ಕಾಲಿಕ ತಡೆ ನೀಡಿರುವ ಹಿನ್ನಲೆಯಲ್ಲಿ ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ಬ್ಲಾಕ್ ಕಾಂಗ್ರೆಸ್ಸಿಗೆ
ಯಾರನ್ನು ಅಧ್ಯಕ್ಷ ಮಾಡಬೇಕು ಎಂಬುದು ಕೆಪಿಸಿಸಿಗೆ ಬಿಟ್ಟ ವಿಚಾರ. ಕೆಪಿಸಿಸಿ ಯಾವ ನಿರ್ಧಾರ ತಗೊಂಡರೂ ಅದನ್ನು ಸ್ವಾಗತಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಿ ಅದೇಶಿಸಿದ ಹಿನ್ನೆಲೆಯಲ್ಲಿ ಫೆ. 24ರಂದು ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಇದೀಗ ಆದೇಶಕ್ಕೆ ತಾತ್ಕಾಲಿಕ ತಡೆ ಮಾಡಿರುವುದರಿಂದ ಸಮಾರಂಭವನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ತಾತ್ಕಾಲಿಕ ತಡೆಗೆ ಸ್ಪಷ್ಟವಾದ ಕಾರಣ ಗೊತ್ತಿಲ್ಲ, ತಮ್ಮ ನೇಮಕಾತಿಯಲ್ಲಿ ಅಸಮಾಧಾನ ಇರುವ ಕೆಲವು ಅಧ್ಯಕ್ಷ ಆಕಾಂಕ್ಷಿಗಳು ಕೆಪಿಸಿಸಿಗೆ ದೂರು ನೀಡಿರುವ ಸಾಧ್ಯತೆಯಿದ್ದು ಈ ದೂರಿನ ಪರಿಶೀಲನೆ ಹಿನ್ನಲೆಯಲ್ಲಿ ತಾತ್ಕಾಲಿಕ ತಡೆ ನೀಡಿರಬಹುದು.

ಸುಳ್ಯದಲ್ಲಿ ಪಕ್ಷವನ್ನು ಮುನ್ನಡೆಸಲು ಯಾರು ಸೂಕ್ತ ಎಂಬ ವಿಚಾರ ಕೆಪಿಸಿಸಿ ನೇತೃತ್ವಕ್ಕೆ ಗೊತ್ತಿದೆ. ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಕೆಪಿಸಿಸಿ ಉಸ್ತುವಾರಿಗಳ ವರದಿಯ ಆಧಾರದಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ತಿ ಮಾಡಿ ಕ್ರಮ ಬದ್ಧವಾಗಿ ಬ್ಲಾಕ್ ಅಧ್ಯಕ್ಷರ ನೇಮಕಾತಿ ನಡೆದಿತ್ತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕರ್ತರ ಭಾವನೆಗೆ ತಕ್ಕಂತೆ ಪಕ್ಷವನ್ನು ಕಟ್ಟುತ್ತೇನೆ ಎಂದು ಬೊಳ್ಳೂರು ಹೇಳಿದರು.
33 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದೇನೆ, ಕೆಲ ಕಾಲ ಬಿಜೆಪಿಗೆ ಹೋದರೂ ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಮತ್ತೆ ಕಾಂಗ್ರೆಸ್ಸಿಗೆ ಬಂದಿದ್ದೇನೆ ಆ ಸಂದರ್ಭದಲ್ಲಿ ಇಲ್ಲಿನ ಎಲ್ಲಾ ನಾಯಕರು ರತ್ನಗಂಬಳಿ ಹಾಕಿ ನನ್ನನ್ನು ಕಾಂಗ್ರೆಸ್ಸಿಗೆ ಸ್ವಾಗತಿಸಿದ್ದರು. ಇದೀಗ ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ವಹಿಸಲು ಸಿದ್ಧನಾಗಿದ್ದೇನೆ. ರಾಜಕೀಯ ಎಂಬುದು ಒಂದು ಚದುರಂಗದಾಟ ಇದ್ದಂತೆ ಅದರಲ್ಲಿ ಹಲವು ಸವಾಲುಗಳು ಎದುರಾಗುತ್ತದೆ. ಆ ಸವಾಲುಗಳನ್ನು ಎದುರಿಸುವ ವಿಶ್ವಾಸ ಇದೆ ಎಂದು ಅವರು ಹೇಳಿದರು. ಇದೀಗ ಬ್ಲಾಕ್ ಅಧ್ಯಕ್ಷರ ನೇಮಕಕ್ಕೆ ತಾತ್ಕಾಲಿಕ ತಡೆ ನೀಡಿರುವುದು ಕಾರ್ಯಕರ್ತರಿಗೆ ಬೇಸರ ಉಂಟು ಮಾಡಿದೆ ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಗೋಕುಲ್ದಾಸ್, ಚೇತನ್ ಕಜೆಗದ್ದೆ, ಶಶಿಧರ ಎಂ.ಜೆ, ಧೀರಾ ಕ್ರಾಸ್ತಾ, ರಾಜು ಪಂಡಿತ್, ನಂದರಾಜ ಸಂಕೇಶ, ಜಯಪ್ರಕಾಶ್ ನೆಕ್ರಪ್ಪಾಡಿ ಉಪಸ್ಥಿತರಿದ್ದರು.