ಸುಳ್ಯ: ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಕಡಿತ ಆಗುವುದನ್ನು ವಿರೋಧಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ನೇತೃತ್ವದಲ್ಲಿ ಸುಳ್ಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಸರಕಾರ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದರೂ ಸರಿಯಾಗಿ ವಿದ್ಯುತ್ ಸರಬರಾಜು ಮಾಡದೆ ಸರಕಾರದ ಹೆಸರು ಕೆಡಿಸುವ ಸ್ಥಿತಿ
ಉಂಟಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೇ ಪ್ರತಿಭಟಿಸಬೇಕಾದ ಸ್ಥಿತಿ ಉಂಟಾಗಿದೆ ಎಂದು ಟಿ.ಎಂ.ಶಹೀದ್ ಹೇಳಿದರು. ಅಧಿಕಾರಿಗಳು, ಸಿಬ್ಬಂದಿಗಳು ಜನರ ಸಮಸ್ಯೆಯನ್ನು ಅರಿತು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಇಷ್ಟೆಲ್ಲಾ ತಾಂತ್ರಿಕ ವ್ಯವಸ್ಥೆಗಳು ಬೆಳೆದಿದ್ದರೂ ಸುಳ್ಯದಲ್ಲಿ ಮಾತ್ರ ಈ ರೀತಿ ವಿದ್ಯುತ್ ಸಮಸ್ಯೆ ಉಂಟಾಗುತಿದೆ ಎಂದು ಅವರು ಪ್ರಶ್ನಿಸಿದರು. ಹಲವು ದಶಕಗಳಿಂದ ಸುಳ್ಯದಲ್ಲಿ
ವಿದ್ಯುತ್ ಸಮಸ್ಯೆ ಇದೆ. ಇದಕ್ಕೆ ಶಾಶ್ವತ ಪರಿಹಾರ ಆಗಬೇಕು ಸುಳ್ಯ ನಗರ, ಸಂಪಾಜೆ, ಅರಂತೋಡು, ಅಜ್ಜಾವರ, ಮಂಡೆಕೋಲು ಮತ್ತಿತರ ಗ್ರಾಮಗಳಲ್ಲಿ ವಾರದಿಂದ ವಿದ್ಯುತ್ ಇಲ್ಲ ಇದಕ್ಕೆ ಶಾಶ್ವತ ಪರಿಹಾರ ಆಗಬೇಕು ಎಂದು ಶಹೀದ್ ಒತ್ತಾಯಿಸಿದರು. ಮೆಸ್ಕಾಂ
ಪುತ್ತೂರು ವಿಭಾಗದ ಇಂಜಿನಿಯರ್ ರಾಮಚಂದ್ರ ಪ್ರತಿಭಟನಾಕಾರ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಮೆಸ್ಕಾಂ ಇಂಜಿನಿಯರ್ ಸುಪ್ರಿತ್ ಉಪಸ್ಥಿತರಿದ್ದರು.
ಸುಳ್ಯದ ವಿದ್ಯುತ್ ಸಮಸ್ಯೆ ಪರಿಹರಿಸಬೇಕು ಎಂದು ಮುಖ್ಯಮಂತ್ರಿ, ಇಂಧನ ಸಚಿವರು ಹಾಗೂ ಮೆಸ್ಕಾಂಗೆ ಮನವಿ ಸಲ್ಲಿಸಲಾಯಿತು. ವಿದ್ಯುತ್ ಸಮಸ್ಯೆ ಸರಪಡಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್.ಕೆ.ಹನೀಫ, ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್, ನ.ಪಂ.ಸದಸ್ಯರಾದ ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ರಾಜು ಪ.ಡಿತ್, ಪ್ರಮುಖರಾದ ರಂಜಿತ್ ರೈ ಮೇನಾಲ, ಅಶ್ರಫ್ ಗುಂಡಿ, ವಿಜಯ ಆಲಡ್ಕ, ಹನೀಫ್ ಬೀಜದಕೊಚ್ಚಿ, ಸಲೀಂ ಪೆರುಂಗೋಡಿ,ಅಬ್ದುಲ್ ಖಾದರ್ ಮೊಟ್ಟೆಂಗಾರು, ಜಮಾಲ್ ಪಂಜ, ಅಬ್ಬಾಸ್ ಅಡ್ಪಂಗಾಯ ಮತ್ತಿತರರು ಉಪಸ್ಥಿತರಿದ್ದರು.