ಪ್ಯಾರೀಸ್: ಪ್ಯಾರಿಸ್ ಒಲಿಂಪಿಕ್ಸ್ 2024 ಗೆ ಅದ್ಧೂರಿ ಚಾಲನೆ ದೊರೆತಿದೆ. ಫ್ರಾನ್ಸ್ ರಾಜಧಾನಿ ಸೀನ್ ನದಿಯ ತಟದಲ್ಲಿ ನಡೆದ ಅತ್ಯಾಕರ್ಷಕ ಉದ್ಘಾಟನಾ ಸಮಾರಂಭಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ವಿಶೇಷ ಎಂದರೆ ಈ ಬಾರಿ ಪರೇಡ್ ಆಫ್ ನೇಷನ್ಸ್ ಅನ್ನು ನದಿಯಲ್ಲಿ ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ಸ್ಟೇಡಿಯಂ ಒಳಗೆ ನಡೆಯುವ
ಕ್ರೀಡಾಪಟುಗಳ ಮೆರವಣಿಗೆಯು ಈ ಸಲ ಬೋಟ್ಗಳಲ್ಲಿ ಆಯೋಜಿಸಿ ಪ್ರೇಕ್ಷರನ್ನು ಭವ್ಯತೆ ಮತ್ತು ಸಾಂಕೇತಿಕವಾಗಿ ಆಕರ್ಷಿಸಿತು.
ಈ ಪರೇಡ್ನಲ್ಲಿ ಭಾರತವನ್ನು ಪಿವಿ ಸಿಂಧು ಹಾಗೂ ಶರತ್ ಕಮಲ್ ಮುನ್ನಡೆಸಿದ್ದರು. ಆಸ್ಟರ್ಲಿಟ್ಜ್ ಸೇತುವೆಯ ಭಾಗದಿಂದ ಶುರುವಾದ ಪರೇಡ್ ಆಫ್ ನೇಷನ್ಸ್ ಮೆರವಣಿಯಲ್ಲಿ 85 ದೋಣಿಗಳು 6,800 ಕ್ಕೂ ಹೆಚ್ಚು ಕ್ರೀಡಾಪಟುಗಳು ಕಾಣಿಸಿಕೊಂಡಿದ್ದರು.

ಪ್ರತಿ ದೇಶಗಳ ಕ್ರೀಡಾಪಟುಗಳ ಆಗಮನದ ವೇಳೆ ನೆರೆದಿದ್ದ ಪ್ರೇಕ್ಷಕರಿಂದ ಹರ್ಷೋದ್ಗಾರ ಮೊಳಗಿತು. ಇನ್ನು ಈ ಉದ್ಘಾಟನಾ ಸಮಾರಂಭದಲ್ಲಿ ಫ್ರೆಂಚ್ ಫುಟ್ಬಾಲ್ ತಾರೆ ಝಿನೆಡಿನ್ ಝಿದಾನೆ, ಟೆನಿಸ್ ಆಟಗಾರ ರಾಫೆಲ್ ನಡಾಲ್ ಒಲಿಂಪಿಕ್ಸ್ ಜ್ಯೋತಿಯೊಂದಿಗೆ ಕಾಣಿಸಿಕೊಂಡಿದ್ದರು. ಇವರ ಜೊತೆಗೆ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್, ಪಾಪ್ ತಾರೆಯರಾದ ಲೇಡಿ ಗಾಗಾ ಮತ್ತು ಅಯಾ ನಕಮುರಾ, IOC ಅಧ್ಯಕ್ಷ ಥಾಮಸ್ ಬಾಚ್ ಮತ್ತು ಪ್ಯಾರಿಸ್ 2024 ಮುಖ್ಯಸ್ಥ ಟೋನಿ ಎಸ್ಟಾಂಗ್ಯುಟ್ ಉಪಸ್ಥಿತರಿದ್ದರು.
ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಸಮ್ಮರ್ ಒಲಿಂಪಿಕ್ಸ್ ಆಗಸ್ಟ್ 11 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಹಾಗೆಯೇ ಈ ಬಾರಿಯ ಒಲಿಂಪಿಕ್ಸ್ ಭಾರತದಿಂದ ಒಟ್ಟು 117 ಅಥ್ಲೀಟ್ಗಳು ಮತ್ತು 140 ಸಹಾಯಕ ಸಿಬ್ಬಂದಿ ಭಾಗವಹಿಸಿದ್ದಾರೆ. ಶನಿವಾರ ಹಾಕಿ ಸೇರಿ 11 ಸ್ಪರ್ಧೆಗಳಲ್ಲಿ ಭಾರತೀಯ ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ














