ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ,ಜೇಸಿಐ ಪಂಜ ಪಂಚಶ್ರೀ, ಲಯನ್ಸ್ ಕ್ಲಬ್ ಪಂಜ ಇದರ ಆಶ್ರಯದಲ್ಲಿ ಆಟಿ ತಿಂಗಳ ವಿಶೇಷ ಕಾರ್ಯಕ್ರಮ ಆಟಿ ನೆಂಪು-2026 ಆಗಸ್ಟ್ 9 ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಟಿ ತಿಂಗಳಿನ
ಮಹತ್ವ ಮತ್ತು ನಮ್ಮ ಪೂರ್ವಜರು ಆಟಿ ತಿಂಗಳಿನಲ್ಲಿ ಆಚರಿಸುತ್ತಿದ್ದ ಆಚರಣೆಗಳು ಮತ್ತು ಸೇವಿಸುತ್ತಿದ್ದ ಆಹಾರಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿತೆ ನೀಡುವ ನಿಟ್ಟಿನಲ್ಲಿ ಆಟಿ ನೆಂಪು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10ಗಂಟೆಯಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಳಿಕ ವಿವಿಧ ಸ್ಪರ್ಧೆಗಳು ನಡೆಯಲಿದೆ. 12 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಕಾರ್ಯಕ್ರಮದ

ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಮತ್ತು ಕಲಾವಿದರಾದ ಕೊಡಗಿನ ಮಿಲನ ಭರತ್ ಇವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ. ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ, ಪಂಜ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಇದರ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ಕುಮಾರ್ ಕರಿಕ್ಕಳ,ಜೇಸಿಐ ವಲಯ ಸಂಯೋಜಕ ಭಾಗೇಶ್ ರೈ, ಲಯನ್ಸ್ ಜಿಲ್ಲಾ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ, ಜಯರಾಮ್ ದೇರಪ್ಪಜ್ಜನಮನೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿವಿಧ ಸ್ಪರ್ಧೆಗಳು:
ಆಟಿ ನೆಂಪು ಕಾರ್ಯಕ್ರಮದ ಅಂಗವಾಗಿ ವಾಟ್ಸಾಪ್ನಲ್ಲಿ ಅರೆಭಾಷೆ ಸ್ವರಚಿತ ಕವನ ಸ್ಪರ್ಧೆ, ಚಿನ್ನೆಮಣೆ ಸ್ಪರ್ಧೆ, ಅರೆಭಾಷೆ ಪ್ರಹಸನ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಅರೆಭಾಷೆ ಭಾಷಣ ಸ್ಪರ್ಧೆ, ಆಟಿ ಖಾದ್ಯ ಸ್ಪರ್ಧೆ, ನೀರ್ ದೋಸೆ ಹೊಯ್ಯುವ ಸ್ಪರ್ಧೆ ಮತ್ತು ಹಸಿ ತರಕಾರಿಗಳ ಆಲಂಕಾರಿಕವಾಗಿ ಜೋಡಿಸುವ ಸ್ಪರ್ಧೆಗಳು ನಡೆಯಲಿದೆ.
ಸಂಜೆ 6.30ರಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಸ್ತುತಪಡಿಸುವ ಲೋಕೇಶ್ ಊರುಬೈಲ್ ನಿರ್ದೇಶನದ ‘ಅಪ್ಪ’ ಅರೆಭಾಷೆ ನಾಟಕ ಪ್ರದರ್ಶನಗೊಳ್ಳಲಿದೆ.
ಆಟಿ ನೆಂಪು ಕಾರ್ಯಕ್ರಮದ ಪ್ರಯುಕ್ತ ಆ.7 ರದ 9ರ ತನಕ ಪಂಜ ದೇವಸ್ಥಾನದ ಸಭಾಂಗಣದಲ್ಲಿ ಟೀಮ್ ಉಬಾರ್ ಇವರ ನೇತೃತ್ವದಲ್ಲಿ ಸ್ವದೇಶಿ ಖಾದ್ಯ ಮೇಳ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವಿಶಿಷ್ಟ ತಿಂಡಿ-ತಿನಿಸುಗಳು, ಸ್ವದೇಶಿ ಮಸಾಲೆ ಪದಾರ್ಥಗಳು, ಕೈಮಗ್ಗ ಸೀರೆಗಳು, ಕರಕುಶಲ ವಸ್ತುಗಳು ಗೃಹೋಪಯೋಗಿ ವಸ್ತುಗಳು, ಇನ್ನೂ ಅನೇಕ ವಿಶೇಷ ಸ್ಟಾಲ್ಗಳು ಮೇಳದ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದು ಸದಾನಂದ ಮಾವಜಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಯೋಜಕರಾದ ವಿಜೇಶ್ ಹಿರಿಯಡ್ಕ, ಜೇಸಿಐ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮುಳಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ,ಸೋಮಶೇಖರ ನೇರಳ ಉಪಸ್ಥಿತರಿದ್ದರು.












