ಸುಳ್ಯ:ಸುಳ್ಯ ನಗರದಲ್ಲಿ ಬುಧವಾರ ಬೆಳಗ್ಗೆ ಬೇಗ ಎದ್ದು ಮನೆಯಿಂದ ಹೊರ ಬಂದವರಿಗೆ ನಾವೇನು ಮಡಿಕೇರಿ ಅಥವಾ ವಯನಾಡಿನಲ್ಲಿ ಇದ್ದೇವಾ ಅಲ್ಲಾ ಊಟಿ ಯಾ ಕೊಡೈಕ್ಕನಾಲ್ಗೆ ಬಂದಿದ್ದೇವಾ ಎಂಬ ಸಂದೇಹ ಬಂದಿರಬಹುದು. ಕಾರಣ ದಟ್ಟ ಮಂಜು ಕವಿದ ವಾತಾವರಣ ಅವರನ್ನು ಸ್ವಾಗತಿಸಿತ್ತು. ಚುಮು ಚುಮು ಚಳಿ ಹಾಗೂ ದಟ್ಟ ಮಂಜು ಮನೆಯಿಂದ ಹೊರ ಬಂದವರನ್ನು ಮುತ್ತಿಕೊಂಡಿತು. ಪರಸ್ಪರ ಕಾಣದಷ್ಟು ರಸ್ತೆಯನ್ನು ಮಬ್ಬಾಗಿಸಿತ್ತು.ಈ ವಾತಾವರಣ ಸಾಕಷ್ಟು

ಮಂದಿಯನ್ನು ಫುಳುಕಿತಗೊಳಿಸಿತು. ಸಾಕಷ್ಟು ಮಂದಿ ಬೆಚ್ಚಗೆ ಮಲಗಿದ್ದರೆ, ಇನ್ನು ಬಹಳ ಮಂದಿಗೆ ವಾಯು ವಿಹಾರ, ವಾಕಿಂಗ್, ಜಾಗಿಂಗ್ ಕ್ರೇಜ್. ಇಂಥ ಹವ್ಯಾಸ ಇದ್ದವರಿಗೆ ಬೆಳಗಿನ ಮಂಜಿನ ಚೆಲ್ಲಾಟ ಮುದ ನೀಡಿತು.
ಬೆಳಗ್ಗೆ 6 ರಿಂದಲೇ ಮಂಜು ಇದ್ದು 7ರ ಸುಮಾರಿಗೆ ದಟ್ಟವಾಗಿ ಹರಡಿತ್ತು. ಸುತ್ತಲೂ ಬಿಳಿ ಮಂಜು ಆವರಿಸಿ ಪರಿಸರವಿಡೀ ಹಾಲ್ನೊರೆ ಸುರಿದಂತೆ ಭಾಸವಾಗುತ್ತಿತ್ತು.ಸುಮಾರು ಒಂದೂವರೆ ತಾಸು ಇದೇ ವಾತಾವರಣ ಮುಂದುವರಿದಿತ್ತು. ಬೆಳಗ್ಗೆ ವಾಕಿಂಗ್, ಜಾಗಿಂಗ್ ಹೋಗಿದ್ದ ಮಂದಿ ದಟ್ಟ ಮಂಜು ಕವಿದ ವಾತಾವರಣದ ಮಜಾ ಅನುಭವಿಸಿದರು.
ನಿನ್ನೆ ಮೊನ್ನೆ ತನಕ ಮಳೆಯ ವಾತಾವರಣ ಇದ್ದು ಇದೀಗ ಒಮ್ಮಿಂದೊಮ್ಮೆಲೇ ಮಂಜು ಆವರಿಸಿ ಪರಿಸರವಿಡೀ ಅಪರೂಪದ ದೃಶ್ಯ ಕಾವ್ಯ ಸೃಷ್ಠಿಸಿತು. ಹಲವರು ಇದನ್ನು ಕಣ್ತುಂಬಿಕೊಂಡು ಪುಳಕಿತರಾದರು. ಬದಲಾದ

ವಾತಾವರಣದಿಂದ ಬೆಳಗ್ಗೆ ಸುಳ್ಯ ಸುಂದರವಾಗಿ ಕಾಣುತ್ತಿತ್ತು. ನಸುಕಿನ ವೇಳೆ ಇಡೀ ಸುಳ್ಯ ಮಂಜಿನ ನಗರಿಯಾಗಿ ಮಾರ್ಪಾಡಾಗಿತ್ತು. ಮುಂಜಾನೆಯ ಮಂಜು ವಿಶೇಷ ಅನುಭವವನ್ನು ನೀಡಿತ್ತು ಎಂದು ವಾಕಿಂಗ್ ಮಾಡುತ್ತಿದ್ದ ಮಂದಿ ಅನುಭವ ಹಂಚಿಕೊಂಡರು.
ಸುಳ್ಯ ಹಾಗೂ ಪರಿಸರದಲ್ಲಿ ಎರಡು ದಿನಗಳಿಂದ ಒಣ ಹವೆ ಮತ್ತು ಬೆಳಗ್ಗಿನ ಜಾವ ಚಳಿಯ ವಾತಾವರಣ ಇದೆ.ಸುಳ್ಯ ತಾಲೂಕಿನ ವಿವಿಧ ಗ್ರಾಮಗಳು ಹಾಗು

ಗಡಿ ಗ್ರಾಮಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ಒಂದೆರಡು ದಿನಗಳಿಂದ ಗ್ರಾಮೀಣ ಭಾಗದಲ್ಲಿ ಚುಮು ಚುಮು ಚಳಿಯ ಅನುಭವ ಉಂಟಾಗುತ್ತಿದೆ.
ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಒಣಹವೆ ಇದೆ. ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ದಟ್ಟ ಮಂಜು ಹಾಗೂ ಚಳಿಯ ವಾತಾವರಣ ಇರಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯೂ ಇದೆ ಎಂದು

ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ತಾಪಮಾನದಲ್ಲಿ ಇಳಿಕೆಯಾಗುವ ಸಾಧ್ಯತೆಯಿದ್ದು ಚಳಿ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದಕ್ಕೆ ಲಾ ನಿನಾ ಎಫೆಕ್ಟ್ ಕಾರಣವಾಗಲಿದೆ ಎಂದು ಹೇಳಲಾಗಿದೆ.

