ಪುತ್ತೂರು: ಈ ಬಾರಿಯ ಎಂಎಲ್ಸಿ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕ ಕ್ಷೇತ್ರ ಎರಡರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯಶಾಲಿಯಾಗಬೇಕು ಇದಕ್ಕಾಗಿ ಕಾರ್ಯಕರ್ತರು ತಳಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.ಅವರು ಪುತ್ತೂರಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಅಭ್ಯರ್ಥಿಗಳಿಗೆ ಪುತ್ತೂರಿನಲ್ಲಿ
ಹೆಚ್ಚು ಮತ ಚಲಾವಣೆಯಾಗುವಂತೆ ನಾವು ಕಾರ್ಯಪೃವೃತ್ತರಾಗಬೇಕಿದೆ ಎಂದು ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ವಲಯ ಮಟ್ಟದಲ್ಲಿ ಕಾರ್ಯಕರ್ತರು ಮತದಾರನ ಬಳಿ ತೆರಳಿ ಮತಯಾಚನೆ ಮಾಡುವಂತೆ ಶಾಸಕರು ಮನವಿ ಮಾಡಿದರು.ಬಿಜೆಪಿಯಲ್ಲಿ ಬಂಡಾಯವಾಗಿದೆ, ಬಿಜೆಪಿ ಹೋಳಾಗಿದೆ. ಸ್ವಪಕ್ಷದ ವಿರುದ್ದವೇ ಬಂಡಾಯವಾಗಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳುವಂತಾಗಬೇಕು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲದ ಕಾರಣ ನಾವು ನಮ್ಮ ಅಭ್ಯರ್ಥಿಗೆ ಹೆಚ್ಚು ಮತ ಬೀಳುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ ರಾಜ್ಯ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಕೊರತೆ ಇದೆ, ವಿಧಾನಸಭೆಯಲ್ಲಿ ಮಂಜೂರಾದ ಬಿಲ್ಗಳು ವಿಧಾನಪರಿಷತ್ನಲ್ಲಿ ಪಾಸಾಗುತ್ತಿಲ್ಲ ಈ ಕಾರಣಕ್ಕೆ ಕಾಂಗ್ರೆಸ್ ಬಹುಮತ ಪಡೆಯಬೇಕಾದ ಅನಿವಾರ್ಯತೆ ಇದ್ದು ಒಟ್ಟು 6 ಅಭ್ಯರ್ಥಿಗಳು ಕಣದಲ್ಲಿದ್ದು ಎಲ್ಲರನ್ನೂ ಗೆಲ್ಲಿಸುವ ಮೂಲಕ ಪಕ್ಷದ ಬಲವರ್ಧನೆ ಮಾಡಬೇಕು ಎಂದು ಹೇಳಿದರು.
ಪುತ್ತೂರು ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ್ ರೈ , ವಿಟ್ಲ ಉಪ್ಪಿನಂಗಡಿ ಬ್ಲಾಕ್ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ,
ಚುನಾವಣಾ ಉಸ್ತುವಾರಿ ಉಡುಪಿಯ ಗಫೂರ್ ಸಾಹೇಬ್, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಉಸ್ತುವಾರಿ ಕೆ.ಎಂ. ಮುಸ್ತಫಾ ಸುಳ್ಯ, ಎಂ.ವೆಂಕಪ್ಪ ಗೌಡ ಸುಳ್ಯ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಮಹಮ್ಮದಾಲಿ. ಪಕ್ಷದ ಪ್ರಮುಖರಾದ ಮುರಳೀಧರ್ ರೈ ಮಟಂತಬೆಟ್ಟು, ವಿಜಯಕುಮಾರ್ ಸೊರಕೆ ಮೊದಲಾದವರು ಉಪಸ್ಥಿತರಿದ್ದರು. ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಪಕ್ಷದ ವಲಯ ಅಧ್ಯಕ್ಷರುಗಳು, ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.