ಸುಳ್ಯ: ರಾಜ್ಯದಾದ್ಯಂತ ತಾಲೂಕು ಮಟ್ಟದ ಆಸ್ಪತ್ರೆಯನ್ನು ಎಲ್ಲಾ ರೀತಿಯ ಚಿಕಿತ್ಸಾ ವ್ಯವಸ್ಥೆಯ ಸುಸಜ್ಜಿತ ಆಸ್ಪತ್ರೆಯಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಸರಕಾರಿ ಆಸ್ಪತ್ರೆಗೆ ತ್ವರಿತವಾಗಿ ತಲುಪುವಂತಾಗಲು ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಹೇಳಿದ್ದಾರೆ. ಸುಳ್ಯದಲ್ಲಿ
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಖಾಲಿ ಇರುವ ವೈದ್ಯರು, ಸಿಬ್ಬಂದಿಗಳ ಹುದ್ದೆಯನ್ನು ಭರ್ತಿ ಮಾಡಿ, ಎಲ್ಲಾ ಆಧುನಿಕ ಚಿಕಿತ್ಸಾ ವ್ಯವಸ್ಥೆಗಳನ್ನು ಒದಗಿಸಿ ತಾಲೂಕು ಆಸ್ಪತ್ರೆಗಳನ್ನು ಗಟ್ಟಿಗೊಳಿಸಲಾಗುವುದು. ರಾಜ್ಯದಾದ್ಯಂತ 800 ಹೊಸ ಆಂಬುಲೆನ್ಸ್ಗಳನ್ನು ಒದಗಿಸಲಾಗುವುದು. ಈ ಆಂಬುಲೆನ್ಸ್ ಮೂಲಕ ಗ್ರಾಮೀಣ ಭಾಗದಿಂದ ಕೇವಲ 20 ನಿಮಿಷದಲ್ಲಿ ತಾಲೂಕು ಆಸ್ಪತ್ರೆಗೆ ತಲುಪುವ ವ್ಯವಸ್ಥೆ ಆಗಲಿದೆ ಎಂದು ಹೇಳಿದರು.
ಸುಳ್ಯದ 110 ಸಬ್ ಸ್ಟೇಷನ್ ಮತ್ತು ಲೈನ್ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಶಾಸಕರ ಜೊತೆ ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ಅಡೆ ತಡೆಗಳ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.












