ಮೇನಾಲ:ವಿಜ್ಞಾನ ಈ ಜಗತ್ತಿನ ಹಲವು ನಿಗೂಢತೆಗಳನ್ನು, ವಿಸ್ಮಯಗಳನ್ನು ತೆರೆದಿಟ್ಟಿದೆ.ವಿಜ್ಞಾನ ಸುಳ್ಳು ಹೇಳುವುದಿಲ್ಲ, ಜಾತಿ,ಧರ್ಮ ಭೇದವಿಲ್ಲದೆ ಮನುಷ್ಯರೆಲ್ಲರೂ ಒಂದೇ ಎಂದು ವಿಜ್ಞಾನ ಪ್ರತಿಪಾದಿಸಿದೆ. ಆದುದರಿಂದ ವೈಜ್ಞಾನಿಕ ಯುಗದಲ್ಲಿ ಮನುಕುಲ ಒಂದೇ ಎಂಬ ವೈಜ್ಞಾನಿಕ ಮನೋಭಾವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಬದುಕಬೇಕು ಎಂದು
ನಿವೃತ್ತ ಶಿಕ್ಷಕರಾದ ಯು.ಎಸ್ ಚಿದಾನಂದ ಮಾಸ್ಟರ್ ಗೂನಡ್ಕ ಹೇಳಿದ್ದಾರೆ.ಇತಿಹಾಸ ಪ್ರಸಿದ್ಧ ಅಜ್ಞಾವರ ಮೇನಾಲ ಮಖಾಂ ಉರೂಸ್ ಅಂಗವಾಗಿ ಏರ್ಪಡಿಸಿದ ಸೌಹಾರ್ದ ಸಮ್ಮೇಳನದಲ್ಲಿ ಅವರು ಉಪನ್ಯಾಸ ನೀಡಿದರು.ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಎಲ್ಲಾ ಧರ್ಮಗ್ರಂಥಗಳೂ ಹೇಳಿದೆ. ಆದರೆ ಅದನ್ನು ಸರಿಯಾಗಿ ಅರ್ಥೈಸದ ಕಾರಣ, ಅದರಂತೆ ಬದುಕದ ಕಾರಣ ನಮ್ಮಲ್ಲಿ ಗೊಂದಲ, ಭೇಧ ಭಾವ ಉಂಟಾಗಿದೆ ಎಂದ ಅವರು ಆಸೆಗಳ ಹಿಂದೆ ಮನಸ್ಸು, ಅದರ

ಸಾಕ್ಷಾತ್ಕಾರಕ್ಕಾಗಿ ಪಂಚೇಂದ್ರೀಯಗಳು ಓಡುತ್ತಿರುತ್ತವೆ, ಇದನ್ನು ನಿಯಂತ್ರಿಸಬೇಕಾಗಿರುವುದು ನಮ್ಮ ಬುದ್ದಿ. ಈ ಬುದ್ದಿ ಸಮರ್ಪಕವಾಗಿ ಬಳಕೆಯಾಗಿರಬೇಕಾದರೆ ಜ್ಞಾನ ಬೇಕು. ಜ್ಞಾನದಿಂದ ಉತ್ತಮ ಬುದ್ದಿ ದೊರೆಯುತ್ತದೆ, ಬುದ್ದಿ ಸರಿಯಾಗಿದ್ದರೆ ಮನಸ್ಸು ಮತ್ತು ಶರೀರವನ್ನು ಸಮರ್ಪಕವಾಗಿ ಬಳಬಹುದು ಎಂದು ಅವರು ಹೇಳಿದರು.
ಸೌಹಾರ್ದ ಸಮಾರಂಭದ ಅಧ್ಯಕ್ಷತೆಯನ್ನು ದರ್ಗಾ ಶರೀಫ್ ಮೊಕ್ತೆಸರರಾದ ಎಂ. ಗುಡ್ಡಪ್ಪ ರೈ ವಹಿಸಿ ಶುಭ ಹಾರೈಸಿದರು. ಅಜ್ಜಾವರ ಮಸೀದಿ ಖತೀಬರಾದ ಹಸೈನಾರ್ ಫೈಝಿ ಕೊಡಗು ಅವರ ದುವಾಶಿರ್ವಚನ ಮಾಡಿದರು.ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮ ಗುರುಗಳಾದ ಫಾ.ಒಲ್ವಿನ್ ಎಡ್ವರ್ಡ್ ಡಿಕುನ್ಹಾ, ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ. ಸಿ,ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ಜಿಲ್ಲಾಧ್ಯಕ್ಷ ಇಕ್ಬಾಲ್ ಬಾಳಿಲ ಹಾಗೂ ಅನೇಕ ಸರ್ವ ಧರ್ಮೀಯ ಹಿತೈಷಿಗಳು ಭಾಗವಹಿಸಿದರು.
ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ಲಾ ಕುಂಞಿ ಹಾಜಿ ಪಳ್ಳಿಕರೆ ವಹಿಸಿದರು.

ಸಮಾರೋಪ ಕಾರ್ಯಕ್ರಮದ ಉದ್ಘಾಟನೆ ಮತ್ತು ಕೂಟು ಪ್ರಾರ್ಥನೆಯನ್ನು ದ.ಕ.ಜಿಲ್ಲಾ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಇದರ ಅಧ್ಯಕ್ಷರಾದ ಶೈಖುನಾ ಅಲ್ಟಾಜ್ ಎನ್.ಪಿ.ಎಂ ಝನುಲ್ ಅಬಿದೀನ್ ತಂಙಳ್ ಕುನ್ನುಂಗೈ ಕೇರಳ ನೆರವೇರಿಸಿದರು. ಅಂತಾರಾಷ್ಟ್ರೀಯ ಪ್ರಭಾಷಣಗಾರ ಆಶಿಕ್ ದಾರಿಮಿ ಆಲಪ್ಪುಝ ಕೇರಳ ಉಪನ್ಯಾಸ ನೀಡಿದರು.
ಸಮಾರೋಪ ಸಮಾರಂಭ ರಾತ್ರಿ ಕೂಟು ಪ್ರಾರ್ಥನೆ, ಮೌಲಿದ್ ಪಾರಾಯಣ ನಡೆಯಿತು. ಉರೂಸ್ ಸಮಾರಂಭ ಸೌಹಾರ್ದ ಕಾರ್ಯಕ್ರಮಕ್ಕೆ ಆಗಮಿಸಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ ಕೆ ಸಿ ಅವರು ಮೇನಾಲ ದರ್ಗಾಕ್ಕೆ ಭೇಟಿ ನೀಡಿ ಹೂವಿನ ಚಾದರ ಸಮರ್ಮಿಸಿದರು. ಈ ಸಂದರ್ಭದಲ್ಲಿ ಅಜ್ಜಾವರ ಮೇನಾಲ ಜಮಾಯತ್ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕಳೆದ ಮೂವತೈದು ವರ್ಷಗಳಿಂದ ಅಜ್ಜಾವರ ಮೇನಾಲ ಮಖಾಂ ಉರೂಸ್ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವ ಹಿರಿಯರಾದ ರವೀಂದ್ರನಾಥ ರೈ ಯವರನ್ನು ಜಮಾಯತಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಊರೂಸ್ ಪ್ರಯುಕ್ತ ಐದು ದಿನಗಳ ಧಾರ್ಮಿಕ ಪ್ರಭಾಷಣ ಎಪ್ರಿಲ್ 10 ರಿಂದ 14 ರ ತನಕ ನಡೆಯಿತು. ಉರೂಸ್ ಕಾರ್ಯಕ್ರಮವು ಎ 10 ರಂದು ಅಜ್ಜಾವರ ಮಸೀದಿ ವಠಾರದಲ್ಲಿ ಉದ್ಘಾಟನೆಗೊಂಡು ಎಪ್ರಿಲ್ 14 ರಂದು ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ಸಮಾಪನ ಗೊಂಡಿತು.ಅಜ್ಜಾವರ ಜುಮ್ಮಾ ಖತೀಬರಾದ ಹಸೈನಾರ್ ಪೈಝಿ ಕೊಡಗು, ಪ್ರಖ್ಯಾತ ಭಾಷಣಗಾರ ಕಲ್ಲಡ್ಕ ಜುಮ್ಮಾ ಮಸೀದಿ ಖತೀಬರಾದ ಸಯ್ಯದ್ ಆಲಿ ಮನ್ನಾನಿ,ಪ್ರಖ್ಯಾತ ವಾಗ್ಮಿ ಅನ್ವರ್ ಆಲಿ ಹುದವಿ ಪುಳಿಯಕ್ಕೋಡ್ ಮಲಪ್ಪುರಂ, ಇಕ್ಬಾಲ್ ಮೌಲವಿ ನೆಲ್ಯಾಹುದಿಕೇರಿ ಕೊಡಗು ಧಾರ್ಮಿಕ ಪ್ರಭಾಷಣ ನೀಡಿದರು.
ಅಜ್ಞಾವರ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲ ಕುಂಞಿ ಹಾಜಿ ಪಳ್ಳಿಕರೆ, ಪ್ರಧಾನ ಕಾರ್ಯದರ್ಶಿ ಶೌಖತ್ ಅಲಿ, ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ ಮತ್ತಿತರರು ನೇತೃತ್ವ ವಹಿಸಿದ್ದರು.
















