ಸುಳ್ಯ:ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ 26ನೇ ವರ್ಷದ ಅಂತಾರಾಜ್ಯ ಮಟ್ಟದ ಉಚಿತ ವೇದ- ಯೋಗ-ಕಲಾ ಶಿಬಿರವು ಇದೇ ಇಂದಿನಿಂದ (ಎಪ್ರಿಲ್ 19ರಿಂದ ಮೇ.17ರ ತನಕ ) ಸುಳ್ಯ ಬಸ್ ನಿಲ್ದಾಣದ ಬಳಿಯ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಲಿದೆ. ಸುಮಾರು 1 ತಿಂಗಳ ಪರ್ಯಂತ ನಡೆಯುವ ಶಿಬಿರದಲ್ಲಿ
ವೇದ, ಯೋಗ ಅಧ್ಯಯನದ ಜೊತೆಗೆ ವಿವಿಧ ಕಲಾ ಪ್ರಕಾರಗಳಾದ ಯಕ್ಷಗಾನ, ಕಂಸಾಳೆ, ಜಾದೂ, ಭಜನೆ, ಸಂಗೀತ, ಪೇಪರ್ ಕಟ್ಟಿಂಗ್, ಮಿಮಿಕ್ರಿ, ಈಜು ತರಬೇತಿ ಮೊದಲಾದ ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಕಲಿಸಲಾಗುತ್ತದೆ. ಶಿಬಿರದಲ್ಲಿ ರಾಜ್ಯ ಮತ್ತು ಹೊರರಾಜ್ಯಗಳಿಂದ ಒಟ್ಟು 220 ಮಂದಿ ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ. ಯಜುರ್ವೇದ ವಿಭಾಗದಲ್ಲಿ 5 ತರಗತಿಗಳಿದ್ದು, ಸಂಧ್ಯಾವಂದನೆಯಿಂದ ಮೊದಲ್ಗೊಂಡು ಸೂಕ್ತಗಳು, ರುದ್ರ ಚಮಕ ಶ್ರೀ ಶಿವರಾಧನೆಯ ಪ್ರಾಕ್ಟಿಕಲ್ ಅಲ್ಲದೆ ಅಗ್ನಿಮುಖ ಪ್ರಯೋಗ, ಸಪ್ತಶತೀ ದುರ್ಗಾಪೂಜೆ ಪಾಠಗಳೂ ನಡೆಯುತ್ತಿವೆ. 25 ವರ್ಷಗಳಲ್ಲಿ ಒಟ್ಟು 4613 ವಿದ್ಯಾರ್ಥಿಗಳು ಪ್ರತಿಷ್ಠಾನದ ಶಿಬಿರದಲ್ಲಿ ವೇದಾಧ್ಯಯನ ನಡೆಸಿದ್ದಾರೆ.
ಶಿಬಿರವನ್ನು ನಯನಕೃಷ್ಣ ಭಟ್ ಪೆರುಂಬಾರು ಹಾಗೂ ಸೌಮ್ಯಾ ನಯನಕೃಷ್ಣ ದಂಪತಿಗಳು ಉದ್ಘಾಟಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ವಹಿಸಲಿದ್ದಾರೆ, ಖ್ಯಾತ ವಾಗ್ಮಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ.ಆರತಿ ವಿ.ಬಿ.ಬೆಂಗಳೂರು ದಿಕ್ಕೂಚಿ ಉಪನ್ಯಾಸ ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ಮತ್ತು ಕೇಶವಕೃಪಾ ಹಿರಿಯ ವಿದ್ಯಾರ್ಥಿ ಕಿರಣ ಎ.ಎಸ್. ಅರ್ತ್ಯಡ್ಕ ಭಾಗವಹಿಸಲಿದ್ದಾರೆ ಎಂದು ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ.
















