ತಿರುವನಂತಪುರ: ಕೇರಳಂನ ನೂತನ ಮುಖ್ಯಮಂತ್ರಿ ಆಯ್ಕೆಯ ಕಗ್ಗಂಟು ಮುಂದುವರಿದಿದೆ. ಸಿಎಂ ಆಯ್ಕೆ ಕುರಿತು ಹೈಕಮಾಂಡ್ ನಾಯಕರು ಇಂದು (ಮಂಗಳವಾರ) ಕೆಪಿಸಿಸಿ ಮಾಜಿ ಅಧ್ಯಕ್ಷರ ಜೊತೆ ಚರ್ಚಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಮಾಜಿ ಅಧ್ಯಕ್ಷರುಗಳನ್ನು, ಕಾರ್ಯಾಧ್ಯಕ್ಷರುಗಳನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ.ವಿಧಾನಸಭಾ ಚುನಾವಣೆಯ
ಫಲಿತಾಂಶ ಬಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿ ಎಂಟು ದಿನಗಳಾದರೂ ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆ ಸಾಧ್ಯವಾಗಿಲ್ಲ. ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ, ಕೆ.ಸಿ. ವೇಣುಗೋಪಾಲ್ ಅವರ ಮಧ್ಯೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಏರ್ಪಟ್ಟಿದೆ. ಮುಖ್ಯಮಂತ್ರಿ ಆಯ್ಕೆ ಕುರಿತು ಹೈಕಮಾಂಡ್ ಸಿಎಂ ಆಕಾಂಕ್ಷಿಗಳ ಜೊತೆ ಚರ್ಚೆ ನಡೆಸಿದರೂ ಒಮ್ಮತ ಏರ್ಪಟ್ಟಿಲ್ಲ. ವಿಪಕ್ಷ ನಾಯಕ ವಿ.ಡಿ.ಸತೀಶನ್ ಪರ ಕಾಂಗ್ರೆಸ್ ಕಾರ್ಯಕರ್ತರು, ಯುಡಿಎಫ್ ಮಿತ್ರ ಪಕ್ಷಗಳು ಹಾಗೂ ಮತದಾರರು ಒಲವು ತೋರಿದ್ದಾರೆ. ಕೆ.ಸಿ.ವೇಣುಗೋಪಾಲ್ ಅವರಿಗೆ ಶಾಸಕರ ಬೆಂಬಲ ಇದೆ ಎನ್ನಲಾಗಿದೆ.
ಕೇರಳಂನ ನೂತನ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಮುಂದಿನ 48 ಗಂಟೆಗಳ ಒಳಗಾಗಿ ತೀರ್ಮಾನ ಹೊರಬೀಳಲಿದೆ ಎಂದು ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಅಭಿಪ್ರಾಯ ಪಟ್ಟಿದ್ದಾರೆ. ಕಾಂಗ್ರೆಸ್ ಒಂದು ಪ್ರಜಾಪ್ರಭುತ್ವವಾದಿ ಪಕ್ಷ. ಹೈಕಮಾಂಡ್ ನಾಯಕರು ಶಾಸಕರು ಹಾಗೂ ಮೈತ್ರಿಕೂಟದ ಪಾಲುದಾರರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ತಿಳಿಸಿದ್ದಾರೆ.











