ಲಂಡನ್: ಪ್ರಮುಖ ಬ್ಯಾಟರ್ಗಳು ಕೈ ಚೆಲ್ಲಿದಾಗ ಕೆಳ ಕ್ರಮಾಂಕದ ಬ್ಯಾಟರ್ಗಳು ಕೆಚ್ಚೆದೆಯಿಂದ ನಡೆಸಿದ ಹೋರಾಟವೂ ವ್ಯರ್ಥವಾಯಿತು. ಪರಿಣಾಮ ಇಂಗ್ಲೆಂಡ್ ವಿರುದ್ಧ ಗೆಲ್ಲಬಹುದಾದ ಲಾರ್ಡ್ಸ್ ಟೆಸ್ಟ್ನಲ್ಲಿ ಭಾರತಕ್ಕೆ 22 ರನ್ಗಳ ಸೋಲು.ಆತಿಥೇಯರು ಐದು ಟೆಸ್ಟ್ಗಳ ಸರಣಿಯಲ್ಲಿ 2–1 ಮುನ್ನಡೆ ಪಡೆದರು. 4 ವಿಕೆಟ್ಗೆ 58 ರನ್ಗಳೊಡನೆ ಕೊನೆಯ ದಿನದಾಟ ಮುಂದುವರಿಸಿದ ಭಾರತಕ್ಕೆ
ಇನ್ನೂ 135 ರನ್ ಗಳಿಸಬೇಕಾಗಿತ್ತು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (48ಕ್ಕೆ3) ಮತ್ತು ಜೋಫ್ರಾ ಆರ್ಚರ್ (55ಕ್ಕೆ3) ಅವರು ತಮ್ಮ ತಂಡವನ್ನು ದೊಡ್ಡ ಗೆಲುವಿನ ಬಳಿ ತಲುಪಿಸಿದರು. ಭೋಜನದ ವೇಳೆಗೆ 7 ವಿಕೆಟ್ಗೆ 82 ರನ್ಗಳೊಡನೆ ಭಾರತ ದಯನೀಯ ಸ್ಥಿತಿಯಲ್ಲಿತ್ತು.ಆದರೆ ಭಾರತ ಸುಲಭವಾಗಿ ಸೋಲೊಪ್ಪಲಿಲ್ಲ. ಹಲವು ಹೋರಾಟಗಳ ಅನುಭವಿ ರವೀಂದ್ರ ಜಡೇಜ (ಅಜೇಯ 61, 181 ಎಸೆತ) ಅವರು ಕೆಚ್ಚೆದೆಯಿಂದ ಆಡಿ ಮೂರು ಜೊತೆಯಾಟಗಳಲ್ಲಿ ಭಾಗಿಯಾದರು.
ಎಂಟನೇ ವಿಕೆಟ್ಗೆ ನಿತೀಶ್ ಕುಮಾರ್ ರೆಡ್ಡಿ ಜೊತೆ 30 ರನ್ ಸೇರಿಸಿದರು. ಜಸ್ಪ್ರೀತ್ ಬೂಮ್ರಾ 104 ನಿಮಿಷ ಬ್ಯಾಟ್ ಮಾಡಿ ಜಡೇಜಾಗೆ ಉತ್ತಮ ಸಾಥ್ ನೀಡಿದರು. 53 ಎಸೆತಗಳನ್ನು ಎದುರಿಸಿ 5 ರನ್ ಗಳಿಸಿ ಔಟ್ ಆದರು. ಬಳಿಕ ಜಡೇಜ ಜೊತೆಗೂಡಿದ ಸಿರಾಜ್ ನಿಧಾನವಾಗಿ ಗುರಿಯತ್ತ ಸಾಗಿದರು.ಸಿರಾಜ್ 30 ಎಸೆತಗಳನ್ನು ಎದುರಿಸಿ ಜಡೇಜಾಗೆ ಬೆಂಬಲ ನೀಡಿದರು. ಜಡೇಜ ಅಸಾಧಾರಣ ಗೆಲುವನ್ನು ಕೊಡಿಸುವ ಆಸೆ ಮೂಡಿತ್ತು. ಆದರೆ ಸ್ಪಿನ್ನರ್ ಶೋಯೆಬ್ ಬಶೀರ್ ಸಿರಾಜ್ ಅವರನ್ನು ಔಟ್ ಮಾಡಿ ಭಾರತದ ಪ್ರತಿರೋಧವನ್ನು ಅಂತಿಮವಾಗಿ ಕೊನೆಗೊಳಿಸಿದರು. ಭಾರತ 170 ರನ್ಗಳಿಗೆ ಆಲೌಟ್ ಆಯಿತು. ನಾಲ್ಕನೇ ಟೆಸ್ಟ್ 23 ರಿಂದ ಆರಂಭಗೊಳ್ಳಲಿದೆ












