ನ್ಯೂಯಾರ್ಕ್:ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸಂಘಟಿತ ಪ್ರಯತ್ನ ನಡೆಸಿದ ಭಾರತ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಮೇರಿಕ ತಂಡದ ವಿರುದ್ಧ 7 ವಿಕೆಟ್ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ವಿಶ್ವಕಪ್ ಟೂರ್ನಿಯಲ್ಲಿ ಸತತ ಮೂರು ಜಯ ದಾಖಲಿಸಿದ ಟೀಂ ಇಂಡಿಯಾ ಸೂಪರ್ 8 ಹಂತಕ್ಕೆ ಲಗ್ಗೆಯಿಟ್ಟಿತು. ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಅಮೆರಿಕ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು
110 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ18.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧ ಶತಕ ಸಿಡಿಸಿದರೆ, ಅರ್ಷದೀಪ್ ಸಿಂಗ್ 4 ವಿಕೆಟ್ ಪಡೆದು ಮಿಂಚಿದರು. ಬೌಲಿಂಗ್ಗೆ ಅನುಕೂಲಕರವಾದ ಪಿಚ್ನಲ್ಲಿ ರನ್ ಗಳಿಸಲು ಬ್ಯಾಟರ್ಗಳು ಪರದಾಡಿದರು.ಭಾರತದ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮ(3) ಹಾಗೂ ವಿರಾಟ್ ಕೊಹ್ಲಿ(0) ಅವರನ್ನು ಆರಂಭದಲ್ಲಿಯೇ ಪೆವಿಲಿಯನ್ಗೆ ಅಟ್ಟಿದ ಅಮೇರಿಕ ಭಾರತಕ್ಕೆ ಆಘಾತ ನೀಡಿತು.ಭಾರತದ ಆರಂಭಿಕ ಜೋಡಿ ಈ ಪಂದ್ಯದಲ್ಲಿಯೂ ವೈಫಲ್ಯ ಅನುಭವಿಸಿತು.
ಬಳಿಕ ಸೂರ್ಯಕುಮಾರ್ ಯಾದವ್ ಹಾಗೂ ರಿಷಭ್ ಪಂತ್ ಸ್ವಲ್ಪ ಚೇತರಿಕೆ ನೀಡಿದರು. ಈ ಹಂತದಲ್ಲಿ 18 ರನ್ ಗಳಿಸಿದ ಪಂತ್ ಅಲಿ ಖಾನ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿ ಮರಳಿದರು.ಬಳಿಕ ಸೂರ್ಯಕುಮಾರ್ ಯಾದವ್ ಹಾಗೂ ಶಿವಂ ದುಬೆ ಮುರಿಯದ ನಾಲ್ಕನೇ ವಿಕೆಟ್ಗೆ 72 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 50 ರನ್ ಗಳಿಸಿದರು. ಶಿವಂ ದುಬೆ 35 ಎಸೆತಗಳಲ್ಲಿ ತಲಾ 1ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 31 ರನ್ ಗಳಿಸಿದರು.
ಮೊದಲು ಬ್ಯಾಟ್ ಮಾಡಿದ ಅಮೇರಿಕ ಪರ ನಿತೀಶ್ ಕುಮಾರ್ 27 ಮತ್ತು ಸ್ಟೀವನ್ ಟೇಲರ್ 24 ರನ್ ಗಳಿಸಿದರು. ಕೋರೆ ಅಂಡರ್ಸನ್ 15 ರನ್ ಸಿಡಿಸಿದರು. ಉಳಿದ ಬ್ಯಾಟರ್ಗಳಿಂದ ಉತ್ತಮ ಬ್ಯಾಟಿಂಗ್ ಬರಲಿಲ್ಲ.
ಭಾರತದ ಪರ ಅತ್ಯುತ್ತಮ ಬೌಲಿಂಗ್ ಸಂಘಟಿಸಿದ ಅರ್ಷದೀಪ್ ಸಿಂಗ್ 4 ಓವರ್ಗಳಲ್ಲಿ 9 ರನ್ ನೀಡಿ 4 ವಿಕೆಟ್ ಕಬಳಿಸಿದರು. ಹಾರ್ದಿಕ್ ಪಾಡ್ಯ ಸಹ 14 ರನ್ಗೆ 2 ವಿಕೆಟ್ ಪಡೆದರು.ಅರ್ಷದೀಪ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.