ಸುಳ್ಯ:ಹಲಸಿನ ಮೌಲ್ಯವರ್ಧನೆಗೆ ವಿಪುಲ ಅವಕಾಶಗಳು ನಮ್ಮ ಮುಂದೆ ಇದೆ. ಲಕ್ಷಾಂತರ ರೂ ಬಂಡವಾಳ ಹೂಡಿಕೆ ಮಾಡಿಯೇ ಹಲಸಿನ ಮೌಲ್ಯವರ್ಧನೆ ಮಾಡಬೇಕೆಂದಿಲ್ಲ. ಸರಳ ಉಪಾಯದಿಂದಲೂ ಹಲಸಿನಿಂದ ಉತ್ತಮ ಆದಾಯ ಪಡೆಯಬಹುದು ಎಂದು ಖ್ಯಾತ ಪರಿಸರ ತಜ್ಞ ಹಾಗು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಅಭಿಪ್ರಾಯಪಟ್ಟರು.ಟೀಮ್ ಉಬಾರ್, ಸುಳ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು
ಸುದ್ದಿ ಕೃಷಿ ಅರಿವು ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಆಡಳಿತ,ತಾಲೂಕು ಪಂಚಾಯತ್, ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳು ಹಾಗೂ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದ ವಠಾರದಲ್ಲಿ ಏರ್ಪಡಿಸಲಾದ 3 ದಿನಗಳ ಹಲಸು ಮತ್ತು ಮಾವು ಮೇಳದ ಅಂಗವಾಗಿ ನಡೆದ ಹಲಸು- ಮಾವು-ಗೇರು ಮೌಲ್ಯವರ್ಧಿತ ಉತ್ಪನ್ನಗಳ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಹಲಸಿನ ಗುಜ್ಜೆ, ತೋಳೆಗಳನ್ನು ಅಡುಗೆ ಮಾಡಲು ತಯಾರಾದ ರೀತಿಯಲ್ಲಿ ಮತ್ತು ತಿನ್ನಲು ತಯಾರು ಮಾಡಿ ಮಾರುಕಟ್ಟೆಗೆ ಬಿಟ್ಟಲ್ಲಿ ಉತ್ತಮ ಆದಾಯ ಪಡೆಯಬಹುದು. ಗ್ರಾಮೀಣ ಭಾಗದಲ್ಲಿ ಜನರು ಈ ನಿಟ್ಟಿನಲ್ಲಿ ಆದಾಯ ಗಳಿಸಲು ಅವಕಾಶ ಇದೆ. ಹಲಸಿನ ಉತ್ಪಾದನೆ ಮತ್ತು ಮೌಲ್ಯವರ್ಧನೆಯಲ್ಲಿ ಕೇರಳ ರಾಜ್ಯ ಮುಂದೆ ಇದೆ. ಕರ್ನಾಟಕದ ಹಳ್ಳಿಗಳಲ್ಲಿಯೂ ಹಲಸಿನಿಂದ ಸಾಕಷ್ಟು ಆದಾಯ ಪಡೆಯುವ ಅವಕಾಶ ಇದೆ ಎಂದು ಅವರು ಹೇಳಿದರು. ಹಲಸು ಮೇಳಗಳು ಜನರ ಉತ್ಸವ ಆಗಬೇಕು ಮತ್ತು ಹಲಸಿನ ಬೆಳವಣಿಗೆಗೆ ಪೂರಕವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಣವ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಶಾಂತ್ ಪೈ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಎಂ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.














