ಸುಳ್ಯ: ಗುಜರಾತ್ನಲ್ಲಿ ಇದ್ದರೆ ನಿರಂತರ 24 ಗಂಟೆ ವಿದ್ಯುತ್ ಇರುತ್ತದೆ, ಮೊನ್ನೆ ಎರಡು ದಿನ ದೆಹಲಿಯಲ್ಲಿದ್ದೆ ಒಮ್ಮೆಯೂ ವಿದ್ಯುತ್ ಕಡಿತ ಆಗಲಿಲ್ಲ, ಎರಡು ದಿನ ಮುಂಬೈನಲ್ಲಿ ಇದ್ದೆ ಅಲ್ಲಿಯೂ ನಿರಂತರ ವಿದ್ಯುತ್ ಇತ್ತು.. ನಿನ್ನೆ ಸುಳ್ಯ ಜಾಲ್ಸೂರಿನ ಮನೆಗೆ ಬಂದೆ 4-5 ಗಂಟೆ ವಿದ್ಯುತ್ ಇರಲೇ ಇಲ್ಲ… ಬೇರೆ ಊರಿನಿಂದ ಸುಳ್ಯಕ್ಕೆ ಬಂದರೆ ಬೆಳಕಿನಿಂದ ಕತ್ತಲೆಗೆ ಬಂದಂತಾಗುತ್ತದೆ..! ಇದು ಖ್ಯಾತ ಪರಿಸರ ತಜ್ಞ ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಅವರ ಮಾತುಗಳು. ಸುಳ್ಯದಲ್ಲಿ
ನಡೆಯುವ ಮಕ್ಕಳ ಹಬ್ಬ ಉದ್ಘಾಟಿಸಿ ಮಾತನಾಡುವ ಸಂದರ್ಭದಲ್ಲಿ ಸುಳ್ಯದ ಅಭಿವೃದ್ಧಿ ಮತ್ತು ವಿದ್ಯುತ್ ಸಮಸ್ಯೆಯ ಬಗ್ಗೆ ಅವರು ಮಾತನಾಡಿದರು. ಸುಳ್ಯದಲ್ಲಿ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಕ್ರಾಂತಿ ನಡೆದರೂ ಇಲ್ಲಿ ಅಭಿವೃದ್ಧಿಯ ಕ್ರಾಂತಿ ನಡೆಯಲೇ ಇಲ್ಲ. ಸ್ವಾತಂತ್ರ್ಯ ಬಂದು ಎಂಟು ದಶಕ ಕಳೆದರೂ ಕನಿಷ್ಠ ನಿರಂತರ ವಿದ್ಯುತ್ತಿನ ಬೆಳಕು ಕೂಡ ಹರಿಸಲು ಸಾಧ್ಯವಾಗದೇ ಇರುವುದು ಖೇದಕರ ಎಂದು ಅವರು ಹೇಳಿದರು.
ಅಭಿವೃದ್ಧಿ ದೃಷ್ಟಿಯಿಂದ ಸುಳ್ಯ ಹಲವು ವರ್ಷಗಳ ಹಿಂದೆ ಇದೆ, ಸರಕಾರಗಳು, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸಗಳು ಸಾಕಷ್ಟು ಇದೆ, ಆದರೆ ಅದ್ಯಾವುದೂ ಆಗುತ್ತಿಲ್ಲ, ಆದರೂ ಅದಕ್ಕೆ ವೇಗ ಇಲ್ಲ ಎಂದು ಅವರು ಅಭಿಪ್ರಾಯ ಪಟ್ಟರು. ಸುಳ್ಯದ ಜನರು ಸಹನಶೀಲರಾದ ಕಾರಣ ಈ ಪ್ರದೇಶವನ್ನು ಸರಕಾರಗಳು ಕಡೆಗಣಿಸಿ ಇಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅವರು ಹೇಳಿದರು.







