ಸುಳ್ಯ:ಸುಳ್ಯ ತಾಲೂಕಿನಾದ್ಯಂತ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಡೆಂಗಿ ಜ್ವರದ ಪ್ರಕರಣಗಳು ಅಧಿಕ ಆಗುತಿರುವ ಬಗ್ಗೆ ವರದಿಯಾಗಿದೆ. ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜುಲೈ ತಿಂಗಳ ಮೊದಲ ವಾರದಲ್ಲಿ 23 ಡೆಂಗಿ ಪಾಸಿಟಿವ್ ಬಂದಿದೆ. ಒಟ್ಟು 123 ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಿದ್ದು 23 ಪ್ರಕರಣಗಳಲ್ಲಿ ಶಂಕಿತ ಡೆಂಗೆ ಪ್ರಕರಣಗಳು (NS1) ಕಂಡು ಬಂದಿದೆ ಎಂದು
ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ. ತಿಳಿಸಿದ್ದಾರೆ. ಜೂನ್ ತಿಂಗಳಲ್ಲಿ ಒಟ್ಟು 33 ಪಾಸಿಟಿವ್ ಡೆಂಗಿ ಪ್ರಕರಣಗಳು ಕಂಡು ಬಂದಿತ್ತು. ಇದೀಗ ಜುಲೈ ಮೊದಲ ವಾರದಲ್ಲಿ 23 ಪಾಸಿಟಿವ್ ಪ್ರಕರಣ ಕಂಡು ಬಂದಿದೆ. 4 ಮಂದಿ ಡೆಂಗಿ ಬಾದಿಸಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಜ್ವರ ಬಾದಿಸಿ ಚಿಕಿತ್ಸೆಗೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತಿದೆ. ಸುಮಾರು 270 ಕ್ಕೂ ಹೆಚ್ಚು ಮಂದಿ ಪ್ರತಿ ದಿನ ಸುಳ್ಯ ಸರಕಾರಿ ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆಗೆ ಬರುತ್ತಿದ್ದು ಇದರಲ್ಲಿ 70-75 ಮಂದಿ ಜ್ವರ ಬಾದಿಸಿ ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ಡಾ.ಕರುಣಾಕರ ಅವರು ಮಾಹಿತಿ ನೀಡಿದ್ದಾರೆ.
ಸುಳ್ಯ ತಾಲೂಕು ಆಸ್ಪತ್ರೆ ಮಾತ್ರವಲ್ಲದೆ ಕೊಲ್ಲಮೊಗ್ರ, ಗುತ್ತಿಗಾರು, ಪಂಜ, ಬೆಳ್ಳಾರೆ, ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಜ್ವರ ಬಾದಿಸಿ ಚಿಕಿತ್ಸೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತಿದೆ. ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ಜ್ವರ ಬಾದೆ ಹಾಗೂ ಡೆಂಗಿ ಪ್ರಕರಣಗಳು ವ್ಯಾಪಕವಾಗಿ ಕಂಡು ಬರುತಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಕಲ್ಮಕಾರು, ಕೊಲ್ಲಮೊಗ್ರ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಜ್ವರ ಬಾದೆ ಹಾಗೂ ಡೆಂಗಿ ಪ್ರಕರಣ ಕಂಡು ಬಂದಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರಾದ ಉದಯ ಶಿವಾಲ ಅವರು.
6 ತಿಂಗಳಲ್ಲಿ 149 ಶಂಕಿತ ಪ್ರಕರಣ:
ಈ ವರ್ಷ ಜನವರಿಯಿಂದ ಜೂನ್ ತನಕ 149 ಶಂಕಿತ ಡೆಂಗಿ ಜ್ವರದ ಪ್ರಕರಣಗಳು ಕಂಡು ಬಂದಿದೆ. ಇದರಲ್ಲಿ 144 NS1, 5 IgM ಪ್ರಕರಣ ದಾಖಲಾಗಿದೆ ಎಂದು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ತಿಳಿಸಿದ್ದಾರೆ.
ಮುಂಜಾಗೃತೆ ವಹಿಸಲು ಆರೋಗ್ಯ ಇಲಾಖೆ ಸೂಚನೆ:
ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಜ್ವರ ಹಾಗೂ ಡೆಂಗಿ ಪ್ರಕರಣ ಕಂಡು ಬಂದಿರುವ ಹಿನ್ನಲೆಯಲ್ಲಿ ಮುಂಜಾಗೃತೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಜ್ವರ ಬಾದೆ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು, ಚೆನ್ನಾಗಿ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರುಗಳು ಸಲಹೆ ನೀಡುತ್ತಾರೆ. ಪರಿಸರದಲ್ಲಿ ಸ್ವಚ್ಛತೆ ಕಾಪಾಡುವುದು, ನೀರು ನಿಲ್ಲದಂತೆ ತಡೆಯುವುದು ಅತೀ ಅಗತ್ಯ ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಸೊಳ್ಳೆ ನಾಶ ಮಾಡುವ ನಿಟ್ಟಿನಲ್ಲಿ ಸರ್ವೆ ನಡೆಸಲಾಗುತಿದೆ.