ಸುಳ್ಯ:ಕುಕ್ಕೆ ಸುಬ್ರಹ್ಮಣ್ಯ ದೇವಸ್ತಾನದ ವ್ಯವಸ್ಥಾಪನಾ ಸಮಿತಿಯ ನೇಮಕ ಸಂದರ್ಭದಲ್ಲಿ ಪ್ರಮುಖರನ್ನು ಪಟ್ಟಿಯಿಂದ ಕೈ ಬಿಟ್ಟಿರುವುದಕ್ಕೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಸುಳ್ಯ ಕಾಂಗ್ರೆಸ್ ಸಭೆಯಲ್ಲಿ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂಗಳೂರು ಭೇಟಿ ಹಾಗೂ ವಿವಿಧ ಫಲಾನುಭವಿಗಳ ಸಮಾವೇಶದ ಪೂರ್ವಭಾವಿಯಾಗಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ
ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇಮಕ ವಿಚಾರ ಭಾರೀ ಚರ್ಚೆಗೆ ಗ್ರಾಸವಾಯಿತು. ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಎನ್. ಜಯಪ್ರಕಾಶ್ ರೈ ಮಾತನಾಡಿ ‘ಮೊದಲ ಪಟ್ಟಿಯಲ್ಲಿ ವ್ಯವಸ್ಥಾಪನಾ ಸಮಿತಿಗೆ ಸದಸ್ಯರಾಗಿ ನನ್ನ ಹೆಸರು ಇತ್ತು. ತದನಂತರ ಸುಳ್ಯದ ಕೆಲ ಕಾಂಗ್ರೆಸ್ ನಾಯಕರ ಒತ್ತಡದಿಂದ ಹೆಸರು ಬಿಟ್ಟಿರುವುದು ಬೇಸರ ತಂದಿದೆ, ನನ್ನ ಹೆಸರನ್ನು ಬಿಡಲು ಕಾರಣ ಏನು ಎಂದು ಕಾಂಗ್ರೆಸ್ ನಾಯಕರು ತಿಳಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಈ ವಿಷಯದಲ್ಲಿ ಹಲವು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೆ.ಗೋಕುಲದಾಸ್ ಮಾತನಾಡಿ ಜೆಪಿ ರೈಯವರ ಹೆಸರು ವ್ಯವಸ್ಥಾಪನಾ ಸಮಿತಿಯಿಂದ ಬಿಟ್ಟಿರುವುದು ಬೇಸರ ತಂದಿದೆ. ರೈಗಳಿಗೆ ಯಾವುದಾದರೂ ಉನ್ನತ ಹುದ್ದೆ ನೀಡಬೇಕು ಎಂದು ಹೇಳಿದರು. ಬಳಿಕ ಈ ವಿಷಯದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನಡುವೆ ತೀವ್ರ ಚರ್ಚೆ ನಡೆಯಿತು.ಭವಾನಿಶಂಕರ ಕಲ್ಮಡ್ಕ, ಜಯಪ್ರಕಾಶ್ ನೆಕ್ರಪ್ಪಡಿ, ಧರ್ಮಪಾಲ ಕೊಯಿಂಗಾಜೆ, ಸತ್ಯಕುಮಾರ್ ಆಡಿಂಜ, ಮೂಸಾ ಪಿ.ಎಂ. ಮೊದಲಾದವರು ಮಾತನಾಡಿ ಜಯಪ್ರಕಾಶ್ ರೈ ಅವರನ್ನು ಕುಕ್ಕೆ ವ್ಯವಸ್ಥಾಪನಾ ಸಮಿತಿಯಿಂದ ಕೈ ಬಿಟ್ಟಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅವರಿಗೆ ರಾಜ್ಯ ಮಟ್ಟದ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ನೀಡಿರುವ ತಡೆ ಕೂಡಲೇ ತೆರವು ಮಾಡಬೇಕು. ಅಧ್ಯಕ್ಷರ ನೇಮಕ ಮಾಡದಿದ್ದರೆ ಪಕ್ಷದಲ್ಲಿ ತಟಸ್ಥರಾಗುವುದಾಗಿ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ಹೇಳಿದರು.ಬ್ಲಾಕ್ ಅಧ್ಯಕ್ಷರ ನೇಮಕಕ್ಕೆ ತಡೆ ವಿಚಾರದಲ್ಲಿ ಕೆಲವು ಮುಖಂಡರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಎಲ್ಲರ ಅಭಿಪ್ರಾಯ ಪಡೆದು ಒಮ್ಮತದಿಂದ ಅಧ್ಯಕ್ಷರ ನೇಮಕ ಆಗಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಸುಳ್ಯ ತಾಲೂಕಿನ ವಿವಿಧ ಕಾಮಗಾರಿಗಳು, ಮಂಡಳಿಗಳ ನೇಮಕ ಹಾಗೂ ಪಕ್ಷದ ಆಂತರಿಕ ಹುದ್ದೆಗಳಿಗೆ ಆಯ್ಕೆ ಆದವರನ್ನು ಮತ್ತೆ ತಡೆ ತಂದು ನಿಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ, ಇದು ಯಾರು ಮಾಡುತ್ತಿದ್ದಾರೆ ಎಂದು ತಿಳಿಯಬೇಕು ಎಂದು ಕಾರ್ಯಕರ್ತರು ಸಭೆಯಲ್ಲಿ ಒತ್ತಾಯಿಸಿದರು.
ಸಭೆಗೆ ವೀಕ್ಷಕರಾಗಿ ಆಗಮಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎಸ್.ಮಹಮ್ಮದ್ ಮುಖ್ಯಮಂತ್ರಿ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಭಾಗವಹಿಸುವಂತೆ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ ವಂದಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,
ಪ್ರಮುಖರಾದ ಸರಸ್ವತಿ ಕಾಮತ್, ಎಸ್. ಸಂಸುದ್ದೀನ್, ಇಕ್ಬಾಲ್ ಎಲಿಮಲೆ, ಮಹಮ್ಮದ್ ಕುಂಞಿ ಗೊನಡ್ಕ, ಬೆಟ್ಟ ರಾಜಾರಾಮ್ ಭಟ್, ರಾಜು ಪಂಡಿತ್, ಶಾಫಿ ಕುತ್ತಮೊಟ್ಟೆ, ಶ್ರೀಹರಿ ಕುಕ್ಕುಡೇಲು, ಕೆ .ಪಿ. ಜಾನಿ, ಇಬ್ರಾಹಿಂ ಕಲ್ಲುಗುಂಡಿ, ಸುರೇಶ ಎಂ.ಎಚ್, ನಂದರಾಜ ಸಂಕೇಶ್, ಅಬ್ದುಲ್ ಗಫೂರ್ ಕಲ್ಮಡ್ಕ, ಶಶಿಧರ ಎಂ.ಜೆ, ಮುತ್ತಪ್ಪ ಪೂಜಾರಿ ಮತ್ತಿತರರು ಮಾತನಾಡಿದರು.