ಸುಳ್ಯ:2014ರಿಂದ 10 ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ದರ 30 ರೂ ಏರಿಸಿದರೂ ಚಕಾರ ಎತ್ತದ ಬಿಜೆಪಿಯವರು ಕರ್ನಾಟಕ ಸರಕಾರ ಕೇವಲ 3 ರೂ ಏರಿಸಿದಾಗ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೆಟ್ರೋಲ್,ಡೀಸೆಲ್ ದರ ಏರಿಕೆಯ ವಿರುದ್ಧ
ಬಿಜೆಪಿಯವರು ನಡೆಸುತ್ತಿರುವ ಪ್ರತಿಭಟನೆ ಕೇವಲ ನಾಟಕ. ಇವರ ಈ ನಾಟಕ ಜನರಿಗೆ ಅರ್ಥ ಆಗ್ತಾ ಇದೆ.ಬಿಜೆಪಿಯು ಜನರಿಗಾಗಿ ಪ್ರತಿಭಟನೆ ಮಾಡ್ತಾ ಇಲ್ಲಾ ಬದಲಾಗಿ ಅಧಿಕಾರ ಹೋಗಿದೆ ಎಂದು ಕಣ್ಣೀರು ಸುರಿಸುತಿದೆ. ಜನರ ಮೇಲಿನ ಪ್ರೀತಿಯಿಂದ ಪ್ರತಿಭನೆ ನಡೆಸುತ್ತಿಲ್ಲ ಬದಲಾಗಿ ಕಾಂಗ್ರೆಸ್ನ ಮೇಲಿನ ಅಸೂಯೆಯಿಂದ ಪ್ರತಿಭಟನೆ ಮಾಡ್ತಾ ಇದ್ದಾರೆ ಎಂದರು. ದರ ಏರಿಕೆಯನ್ನು ಸಮರ್ಥಿಸುತ್ತಿಲ್ಲ. ಆದರೆ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಇಂಧನ ದರ ಕಡಿಮೆ ಇದೆ. ಜಿಎಸ್ಟಿ ಹಣ ಕೇಂದ್ರ ಸರಕಾರ ರಾಜ್ಯಗಳಿಗೆ ಸರಿಯಾಗಿ ನೀಡ್ತಾ ಇಲ್ಲ. ಇದರಿಂದ ಅಭಿವೃದ್ಧಿಗೆ ಹಣಕ್ಕಾಗಿ ರಾಜ್ಯ ಸರಕಾರಗಳು ಕೆಲವೊಂದು ತೆರಿಗೆ ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಅವರು ಹೇಳಿದರು.
ಕೃಷಿಕರಿಗೆ ಅತೀ ಅಗತ್ಯವಾದ ರಸಗೊಬ್ಬರ ಬೆಲೆ ಏರಿಕೆ ಆಗಿದೆ ಅದರ ಬಗ್ಗೆ ಬಿಜೆಪಿಗರು ಯಾಕೆ ಮಾತನಾಡುತ್ತಾ ಇಲ್ಲಾ, ನೀಟ್ ಪರೀಕ್ಷೆ ಆವಾಂತರ ಕುರಿತು ಬಿಜೆಪಿಯವರು ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ ಅವರು ಬಿಜೆಪಿ ಅಧಿಕಾರದ 10 ವರ್ಷಗಳಲ್ಲಿ ಗ್ಯಾಸ್ ಸೇರಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ದುಪ್ಪಟ್ಟು ಮಾಡಿದ ಬಿಜೆಪಿಗೆ ಪ್ರತಿಭಟನೆ ನಡೆಸುವ ನೈತಿಕತೆ ಇಲ್ಲಾ ಎಂದು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಒಂದು ಸೀಟ್ ಇದ್ದದು ಒಂಭತ್ತಕ್ಕೆ ಏರಿದ್ದು ಕಾಂಗ್ರೆಸ್ನ ಸಾಧನೆಯೇ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಪ್ರಮುಖರಾದ ಭವಾನಿಶಂಕರ ಕಲ್ಮಡ್ಕ, ನಂದರಾಜ ಸಂಕೇಶ, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು