ಸುಳ್ಯ:ಕಾಂಕ್ರೀಟ್ ರಸ್ತೆಯಲ್ಲಿ ಕರೆಂಟ್ ಕಂಬವೋ…? ಕರೆಂಟ್ ಕಂಬದ ಸುತ್ತ ಕಾಂಕ್ರೀಟ್ ರಸ್ತೆಯೋ..?? ಸುಳ್ಯ ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಕೆಳ ಭಾಗವಾಗಿ ಸರಕಾರಿ ಪದವಿಪೂರ್ವ ಕಾಲೇಜಿನ ಕಡೆಗೆ ತೆರಳುವ ರಸ್ತೆಯಲ್ಲಿ ಈಗ ಪ್ರಯಾಣಿಸಿದವರಿಗೆ ಹೀಗೊಂದು ಜಿಜ್ಞಾಸೆ ಮೂಡದೇ ಇರದು. ಈ ರಸ್ತೆಯಲ್ಲಿ ಕೆಲವು ಭಾಗದಲ್ಲಿ
ಇತ್ತೀಚೆಗೆ ಕಾಂಕ್ರೀಟೀಕರಣ ಮಾಡಲಾಗಿದೆ. ಆದರೆ ಕಾಂಕ್ರೀಟ್ ನಡೆದ ಭಾಗದಲ್ಲಿ ಇದ್ದ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡದೆ ವಿದ್ಯುತ್ ಕಂಬವನ್ನು ಸೇರಿಸಿ ಕಾಂಕ್ರೀಟ್ ಮಾಡಿ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಸಾಮಾನ್ಯವಾಗಿ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಿದ ಬಳಿಕ ರಸ್ತೆ ಕಾಂಕ್ರೀಟ್ ಮಾಡಲಾಗುತ್ತದೆ. ಆದರೆ ಇಲ್ಲಿ ಕಂಬವನ್ನು ಹಾಗೆಯೇ ಉಳಿಸಿ

ಅಗಲೀಕರಣ ಮಾಡಿ ಕಾಂಕ್ರೀಟ್ ಮಾಡಲಾಗಿದ್ದು 3-4 ವಿದ್ಯುತ್ ಕಂಬ ಹಾಗೆಯೇ ಉಳಿಸಲಾಗಿದೆ. ಇದು ಯಾಕೆ ಹೀಗೆ ಎಂಬ ಆಶ್ಚರ್ಯ ಮತ್ತು ಪ್ರಶ್ನೆ ಸಾರ್ವಜನಿಕರಲ್ಲಿ ಉಂಟಾಗಿದೆ. ಇಲ್ಲಿ ಕೆಲವು ಭಾಗ ಕಾಂಕ್ರೀಟ್ ಮಾಡಲಾಗಿದ್ದು ಈ ಮಾರ್ಗದಲ್ಲಿ ರಾತ್ರಿಯ ವೇಳೆ ಅಥವಾ ಮಳೆಗೆ ವಾಹನ ಚಲಾಯಿಸುವಾಗ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಈ ರಸ್ತೆಯಲ್ಲಿ ಪ್ರಯಾಣಿಸುವ ಸವಾರರು ಮಾತ್ರ ‘ಇದು ಯಾವ ಸೀಮೆಯ ರಸ್ತೆ ಅಭಿವೃದ್ಧಿ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ…! ರಸ್ತೆಯ ಮಧ್ಯೆಯ ಕಾಂಕ್ರೀಟ್ ಕಂಬ ಮತ್ತು ರಸ್ತೆ ಟ್ರೋಲ್ಗೂ ಗುರಿಯಾಗುತಿದೆ.







