ಸುಳ್ಯ:ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಜುಲೈ 6 ರಂದು ಪೂ.10ರಿಂದ ಸುಳ್ಯದ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ ಎಂದು ಸಾರ್ವಜನಿಕ ಅಭಿನಂದನಾ ಸಮಿತಿಯ
ಪ್ರಧಾನ ಸಂಚಾಲಕ ಹಾಗು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ರಾಜಕೀಯ, ಧಾರ್ಮಿಕ ಭೇದ ಭಾವ ಇಲ್ಲದೆ ಸುಳ್ಯದ ಎಲ್ಲರೂ ಒಟ್ಟಾಗಿ ಸೇರಿ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಎಲ್ಲಾ ರಾಜಕೀಯ, ಸಾಮಾಜಿಕ ಮುಖಂಡರುಗಳನ್ನು ಸೇರಿಸಿ ಅಭಿನಂದನಾ ಸಮಿತಿಯನ್ನು ರಚಿಸಲಾಗಿದೆ.ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಹಿಸಲಿದ್ದಾರೆ.ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಉದ್ಘಾಟಿಸಲಿದ್ದಾರೆ. ಮೂರು ಧರ್ಮದ ಧಾರ್ಮಿಕ ಗುರುಗಳನ್ನು ಆಹ್ವಾನಿಸಲಾಗಿದ್ದು

ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಪೇರಡ್ಕ-ಗೂನಡ್ಕ ಜುಮಾ ಮಸೀದಿಯ ಖತೀಬರಾದ ಅಹಮ್ಮದ್ ನಈಮ್ ಮುಅಬರಿ ಫೈಝಿ, ಗುತ್ತಿಗಾರು ಸೈಂಟ್ ಮೇರಿಸ್ ಚರ್ಚ್ನ ಧರ್ಮಗುರು ಫಾ. ಥೋಮಸ್ ಪಾರೆಕ್ಕಾಟಿಲ್ ಆಶೀರ್ವಚನ ನೀಡಲಿದ್ದಾರೆ. ಸುಳ್ಯದ ರಾಜಕೀಯ, ಸಾಮಾಜಿಕ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ.
ಸಮಾರಂಭಕ್ಕೂ ಮುನ್ನ ಜ್ಯೋತಿ ವೃತ್ತದಿಂದ ಮೆರವಣಿಗೆ ನಡೆಯಲಿದೆ,ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ರಿ.
ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ. ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಸಮಾರಂಭದ ನಡೆಯುವ ಸ್ಥಳದಲ್ಲಿ ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳಿಂದ ಸಚಿವರಿಗೆ ಮನವಿಗಳನ್ನು ನೀಡಲು ಅವಕಾಶವಿದ್ದು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗುವುದು. ಈ ಅರ್ಜಿಗಳನ್ನು ಹಾಗು ಸುಳ್ಯದ ಅಭಿವೃದ್ಧಿಗೆ ಪೂರಕವಾದ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಅಭಿನಂದನಾ ಸಮಿತಿ ವತಿಯಿಂದ ಸಚಿವರಿಗೆ ಸಲ್ಲಿಸಲಾಗುವುದು ಎಂದು ಭರತ್ ಮುಂಡೋಡಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಅಭಿನಂದನಾ ಸಮಿತಿಯ ಪದಾಧಿಕಾರಿಗಳಾದ ಕೆ.ಎಂ. ಮುಸ್ತಫ, ಮೂಸಾಕುಂಞಿ ಪೈಂಬೆಚ್ಚಾಲು,ಡಾ.ಎನ್.ಎ. ಜ್ಞಾನೇಶ್, ಹರೀಶ್ ರೈ ಉಬರಡ್ಕ ಉಪಸ್ಥಿತರಿದ್ದರು.






