ಸುಳ್ಯ:ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಿರುವುದು ಸ್ವಾಗತಾರ್ಹ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಹೇಳಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಗ್ರಾಮಗಳ ಅರಣ್ಯದಂಚಿನಲ್ಲಿ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಕೃಷಿಕರಿಗೆ ಸಮಸ್ಯೆ ಆಗಬಾರದು ಎಂಬುದು ಪಕ್ಷದ ನಿಲುವು.ಆ ಹಿನ್ನಲೆಯಲ್ಲಿ
ಸರಕಾರದ ಕ್ರಮವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿದ್ಯಾರ್ಥಿನಿಗೆ ಯುವಕ ಕಿರುಕುಳ ನೀಡಿರುವ ಘಟನೆಯನ್ನು ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ. ಆ ಹಿನ್ನಲೆಯಲ್ಲಿ ಯುವಕನ ಮೇಲೆ ಗುಂಪು ಸೇರಿ ಹಲ್ಲೆ ಮಾಡಿರುವುದು ಕೂಡ ಖಂಡನೀಯ.ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ.ಪೊಲೀಸರು ಸಾಂದರ್ಭಿಕವಾಗಿ ಸರಿಯಾಗಿ ಕೆಲಸ ಮಾಡಿದ್ದಾರೆ.ಈ ರೀತಿಯ ಘಟನೆ ಸಮಾಜದಲ್ಲಿ ಶಾಂತಿಯನ್ನು ಕದಡುತ್ತದೆ. ಕಾನೂನು ತನ್ನದೇ ರೀತಿಯಲ್ಲಿ ಕೆಲಸ ಮಾಡುತ್ತದೆ. ಬಳಿಕ ಪೊಲೀಸರ ವಿರುದ್ಧ ಸಂಘ ಪರಿವಾರ ಸಂಘಟನೆಗಳು ಪ್ರತಿಭಟನೆ ನಡೆಸಿರುವುದು ಸರಿಯಾದ ಕ್ರಮ ಅಲ್ಲ. ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿರುವುದು ಖಂಡನೀಯ ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ ಈ ರೀತಿ ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುವುದು ಪೊಲೀಸರ ಕರ್ತವ್ಯದ ಸ್ಥೈರ್ಯವನ್ನು ಕುಗ್ಗಿಸಲು ಕಾರಣವಾಗುತ್ತದೆ ಎಂದು ಹೇಳಿದರು.
ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ ವಿದೇಶದದ ಭಾರತಕ್ಕೆ 17 ಸಾವಿರ ಮೆಟ್ರಿಕ್ ಟನ್ ಅಡಿಕೆ ಆಮದು ಮಾಡಿರುವುದರಿಂದ ಅಡಿಕೆ ದರ ನೆಲಕಚ್ಚಲು ಕಾರಣವಾಗಬಹುದು ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ ‘ ನಗರ ಪಂಚಾಯತ್ನ ಬಿಜೆಪಿ ಆಡಳಿತದ ವೈಫಲ್ಯದಿಂದ ಕಲ್ಚರ್ಪೆಯ ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ವಣ ಆಗಲು ಕಾರಣವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ, ಕಾಂಗ್ರೆಸ್ ಮುಖಂಡರಾದ ಕೆ.ಗೋಕುಲ್ದಾಸ್,
ಸುರೇಶ್ ಎಂ.ಎಚ್, ಶಶಿಧರ ಎಂ.ಜೆ, ನಂದರಾಜ ಸಂಕೇಶ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.