ನವದೆಹಲಿ: ತೆಲಂಗಾಣ, ಆಂಧ್ರಪ್ರದೇಶ, ಉತ್ತರಾಖಂಡ ಹಾಗೂ ಮಹಾರಾಷ್ಟ್ರ ಘಟಕಗಳ ನೂತನ ಅಧ್ಯಕ್ಷರನ್ನು ಬಿಜೆಪಿ ಮಂಗಳವಾರ ಆಯ್ಕೆ ಮಾಡಿದೆ.ಮಾಜಿ ಸಚಿವ ರವೀಂದ್ರ ಚವಾಣ್ ಅವರನ್ನು ಮಹಾರಾಷ್ಟ್ರ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉತ್ತರಾಖಂಡ ಘಟಕದ ಅಧ್ಯಕ್ಷರಾಗಿ
ರಾಜ್ಯಸಭಾ ಸದಸ್ಯ ಮಹೇಂದ್ರ ಭಟ್ ಪುನರಾಯ್ಕೆಗೊಂಡಿದ್ದಾರೆ. ಆಂಧ್ರಪ್ರದೇಶ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಹಿರಿಯ ನಾಯಕ ಪಿ.ವಿ.ಎನ್.ಮಾಧವ ಅವರು ಆಯ್ಕೆಯಾಗಿದ್ದು, ಅಮರಾವತಿಯಲ್ಲಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.ತೆಲಂಗಾಣ ಘಟಕದ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎನ್.ರಾಮಚಂದ್ರ ರಾವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇದರೊಂದಿಗೆ ಬಿಜೆಪಿಯ 37 ರಾಜ್ಯ ಘಟಕಗಳ ಪೈಕಿ 22 ಘಟಕಗಳ ಅಧ್ಯಕ್ಷರ ಆಯ್ಕೆ ಪೂರ್ಣಗೊಂಡಂತಾಗಿದೆ. ಕನಿಷ್ಠ 19 ರಾಜ್ಯ ಘಟಕಗಳ ಅಧ್ಯಕ್ಷರ ಆಯ್ಕೆ ಮುಗಿದ ಬಳಿಕವೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಾರಂಭವಾಗುತ್ತದೆ.