ಸುಳ್ಯ:ಬೇಸಿಗೆ ಶಿಬಿರಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕ ಮತ್ತು ಶಿಬಿರಗಳು ಮಕ್ಕಳಿಗೆ ಸಂಭ್ರಮದ ದಿನಗಳನ್ನು ನೀಡುತ್ತದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಅಭಿಪ್ರಾಯಪಟ್ಟರು.ಸುಳ್ಯದ ಸಾಂಸ್ಕೃತಿಕ ಕಲಾ ಶಾಲೆ ರಂಗಮಯೂರಿಯ ವತಿಯಿಂದ
ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ’ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಯಮನೂರಪ್ಪ ಸಿದ್ದಪ್ಪ ಹರಗಿ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಉದ್ಯಮಿ ಕೃಷ್ಣ ಕಾಮತ್,ಶ್ರೀ ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್ ಭಾಗವಹಿಸಿ

ಮಾತನಾಡಿದರು. ಭವಾನಿಶಂಕರ ಅಡ್ತಲೆ ಸ್ವಾಗತಿಸಿ, ರಂಗಮಯೂರಿಯ ನಿರ್ದೇಶಕ ಲೋಕೇಶ್ ಊರುಬೈಲು ವಂದಿಸಿದರು.
ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶಿಬಿರದಲ್ಲಿ ಸಿದ್ಧಗೊಂಡ 5 ಕಿರು ನಾಟಕಗಳ ಪ್ರದರ್ಶನ ನಡೆಯಿತು.ಶಿಬಿರದ ವಿದ್ಯಾರ್ಥಿಗಳೇ ಪಾತ್ರಧಾರಿಗಳಾದ

ಸೀತಾರಾಮ ಕುಲಾಲ್ ರಚಿಸಿ, ಮೋಹನ್ ಶೇಣಿ ನಿರ್ದೇಶಿಸಿದ
‘ಮಣ್ಣಿನ ಮಗಳು ಅಬ್ಬಕ್ಕ’, ಏ.ಕೆ.ರಾಮನುಜಂ ರಚನೆಯ
ಮಹೇಶ್ ಆಚಾರಿ ಹೊನ್ನಾವರ ನಿರ್ದೇಶಿಸಿದ
‘ಮುನ್ನೂರೊಂದು ರಾಮಾಯಣ’ ಜನಪದ ಮೂಲದಲ್ಲಿ ರೋಹಿತ್ ಎಸ್ ಬೈಕಾಡಿ ನಿರ್ದೇಶಿಸಿದ’ಕಾಮನ್ ಸೆನ್ಸ್’, ಹೇಮಂತ್ ಬೆಂಗಳೂರು ರಚಿಸಿ ನಿರ್ದೇಶಿಸಿದ ‘ಸಿಂಗಾರಯ್ಯನ ಬಂಗಾರದ ಕಥೆ’, ಚರಿತಾ ಶಾರದಾ ಸುಳ್ಯ ರಚಿಸಿ ನಿರ್ದೇಶಿಸಿದ’ಪರಿಸರ ಪರಿವಾರ’ ನಾಟಕಗಳು ಪ್ರದರ್ಶನಗೊಂಡವು.


















