ಮಂಗಳೂರು : ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ದಿ. ಗುರುವಪ್ಪ ಎನ್.ಟಿ.ಬಾಳೆಪುಣಿ ಅವರಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಶ್ರದ್ಧಾಂಜಲಿ ಸಭೆ ಮಂಗಳವಾರ ನಗರದ ಪ್ರೆಸ್ಕ್ಲಬ್ನಲ್ಲಿ ನಡೆಯಿತು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ ಕಿತ್ತಳೆ ಮಾರುತ್ತಿದ್ದ ನನ್ನನ್ನು ಮೊದಲ ಬಾರಿಗೆ
ಸಮಾಜಕ್ಕೆ ಪರಿಚಯಿಸಿದ್ದು ಬಾಳೆಪುಣಿ ಅವರು. ಹಳ್ಳಿಯ ಸಾಮಾನ್ಯ ವ್ಯಕ್ತಿಯಾಗಿದ್ದ ನಾನು ಬಾಳೆಪುಣಿ ಅವರ ಬರಹ ಹಾಗೂ ಪ್ರೋತ್ಸಾಹದಿಂದ ಪ್ರಧಾನಿ ಮೋದಿ ಅವರನ್ನು ಕಾಣುವಂತಾಯಿತು ಎಂದರು.ಹೊಸದಿಗಂತ ಪತ್ರಿಕೆಯ ಸಿಇಒ ಪ್ರಕಾಶ್ ಪಿ.ಎಸ್.,
ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ, ಚಿದಂಬರ ಬೈಕಂಪಾಡಿ, ರವಿ ಪೊಸವಣಿಕೆ, ಭಾಸ್ಕರ ರೈ ಕಟ್ಟ, ಬಾಳೆಪುಣಿ ಅವರ ಅಣ್ಣನ ಮಗ ಸುಧೀರ್, ಪಿ.ಬಿ.ಹರೀಶ್ ರೈ ನುಡಿ ನಮನ ಸಲ್ಲಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.