*ಎಂ.ನಾ.ಚಂಬಲ್ತಿಮಾರ್.
ಮೊನ್ನೆ..ಮೊನ್ನೆ ಸಾಹಿತ್ಯದ ಜಾಗತಿಕ ಜಗಲಿಯಲ್ಲಿ ತಾಜಾ ಭಾರತೀಯ ನೂಲಿನ ಸೀರೆಯುಟ್ಟ ಕನ್ನಡದ ನೀರೆಯರಿಬ್ಬರು
ಜಗತ್ತಿನಲ್ಲೇ ಮೊದಲ ಬಾರಿಗೆ “ಇಂಟರ್ ನ್ಯಾಷನಲ್ ಬೂಕರ್” ಪ್ರಶಸ್ತಿ ಕೈಗೆತ್ತಿಕೊಂಡಾಗ ಭಾರತದಲ್ಲಿ ನಟ್ಟ ನಡುರಾತ್ರಿಯ ಹೊತ್ತು!!
ಈ ಹೊತ್ತು “ನನ್ನ ಬಾನಂಗಳದಲ್ಲಿ ಸಾವಿರದ ಮಿನುಗು ತಾರೆಗಳು ಜ್ವಲಿಸುತ್ತವೆ” ಎನ್ನುತ್ತಲೇ ವಿಶ್ವ ಪ್ರತಿಷ್ಠೆಯ “ಬೂಕರ್” ಪ್ರಶಸ್ತಿಯನ್ನು ಭಾರತಾಂಬೆಯ ಮುಡಿಗೆ ಮುಡಿಸಿದವರು ನಮ್ಮ ಅಕ್ಕರೆಯ ಕತೆಗಾರ್ತಿ, ಸಾಮಾಜಿಕ ಬದ್ಧತೆಯ ಮನುಜಪರ ಚಿಂತಕಿ ಬಾನು ಮುಷ್ತಾಕ್ ಮತ್ತು
ಮೂಲಾಶಯದ ಕಲ್ಪನೆಗೆಡದೇ ಜಗತ್ತಿಗಿತ್ತ ಅನುವಾದಕಿ , ಪತ್ರಕರ್ತೆ ದೀಪಾ ಬಸ್ತಿ.ಆದ್ದರಿಂದಲೇ ರಾತ್ರಿ ಬೆಳಗಾಗುವುದರೊಳಗೆ ಇವರು ಭಾರತದ ಭಾನಂಗಳದ ದೀಪವಾದರು, ದೀಪಾವಳಿಯಾದರು…
ಕನ್ನಡದ ದೀಪ ಜಗದಗಲ ಹಚ್ಚಿದರು…
ಕತೆಗಾರ್ತಿ ಬಾನುಮುಷ್ತಾಕ್ ಸಾಮಾಜಿಕ ಹೋರಾಟಗಳೊಂದಿಗೆ ಪ್ರಗತಿಪರ ಚಿಂತನೆಯ ಸಾಹಿತ್ಯವನ್ನೇ ಸಮಾಜದ ಅನಿಷ್ಟಗಳ ವಿರುದ್ಧ ಅಸ್ತ್ರವಾಗಿಸಿಕೊಂಡವರು.ನಮ್ಮ ಚಂದ್ರಗಿರಿಯ ತೀರದ ಸಾರಾ ಅಬೂಬಕರ್ ಆರಂಭಿಸಿದ ಅಕ್ಷರಾಂದೋಲನ ಮುಂದುವರಿಸಿದವರು.
ಅವರ ಮಹಿಳಾ ಸಂವೇದನೆಯ ತುಮುಲಗಳ ತುಡಿತವನ್ನು

ಭಾವಜೀವದಿಂದ ಅಷ್ಟೇ ತೀವ್ರತೆಯ ಜೀವ ದ್ರವ್ಯ ಕಾಪಾಡಿ ಇಂಗ್ಲೀಷಿಗೆ ಅನುವಾದಿಸಿದವರು ನಮ್ಮ ಕೊಡಗಿನ ದೀಪಾ ಬಸ್ತಿ. ಅವರು ಮೂಲತಃ ಆಂಗ್ಲ ಭಾಷೀಯ ಪತ್ರಕರ್ತೆ, ಅಂತರಾಷ್ಟ್ರೀಯ ಲೇಖಕಿ. ಒಬ್ಬರು 70-80ರ ದಶಕದಲ್ಲಿ ಕನ್ನಡನಾಡಿನ ಜನಪರ ಚಳುವಳಿಗಳ ಮಾನುಷಿಕ ಚಿಂತನೆಯಿಂದ ರೂಪುಗೊಂಡವರು. ಇನ್ನೊಬ್ಬರು ಅನಂತರ ಕಾಲವೇ ಸ್ಥಿತ್ಯಂತರಗೊಂಡ ಸಂದರ್ಭದಲ್ಲಿ ಸಂವೇದನೆಯ ಹೊಸ ನೆಲೆ ಹುಡುಕಿದವರು. ಇಬ್ಬರೂ ಸೇರಿ ಕನ್ನಡಾಂಬೆಯ ಹಣೆಗೆ ಕಸ್ತೂರಿ ತಿಲಕ ತೊಡಿಸಿದ್ದಾರೆ. ಈಗ ಜಗತ್ತಿನ ಸಾಹಿತ್ಯಾಸಕ್ತರ ಕಣ್ಣು ಕನ್ನಡದ ಮೇಲಿದೆ. ಇದಲ್ಲವೇ ಭಾರತದ ಹೆಮ್ಮೆ..?!
ಬಾನು ಮುಷ್ತಾಕ್ ಬರೆದ ಕತೆಗಳೆಂದರೆ ಒಂದು ಸಮಾಜದ ಹೆಣ್ಮಕ್ಕಳು ಶೋಷಣೆಯ ದೌರ್ಜನ್ಯ ಅನುಭವಿಸುತ್ತಾರೆಂಬ ಬರಡು ವರದಿ ರೂಪದ್ದಲ್ಲ. ಅದು ಭಾರತೀಯ ಮಹಿಳೆಯರ ಅಂತರಂಗದ ತುಮುಲದ ಧ್ವನಿ. ಅದು ದೇಶದ ಎಲ್ಲ ಜನಾಂಗದ ಮಹಿಳೆಯರ ಕೂಗು! ಅವರ ಕತೆಗಳಲ್ಲಿ ಆಯಾಯ ಕಾಲದ ಸಾಂಸ್ಕೃತಿಕ ಜೀವನ ಪರಿಸರದ ಜತೆಗೆ ಮನೋಸ್ಥಿತಿಗಳ ಕೈಗನ್ನಡಿ ಇದೆ. ಇದು ಬಂಡಾಯ ಮನೋಧರ್ಮದಂತೆ ಕಂಡರೂ ಸಹಜ ಬದುಕಿನ ಜೀವಂತ ಚಿತ್ರಣಗಳು!
ಇಂಥ ಭಾವತೀವ್ರತೆಯ ಹೆಂಗರುಳಿನ ಕತೆಗಳು ಸಾಂಸ್ಕೃತಿಕವಾಗಿ ಭಿನ್ನ ಪರಿಸರವೊಂದಕ್ಕೆ ಕೈ ದಾಟುವಾಗ , ಅಲ್ಲಿನ ಓದುಗರಿಗಿಂತ ಮೊದಲು ಕಥಾ ತಜ್ಞರ ಮನಗೆಲ್ಲಬೇಕೆಂದರೆ ಅನುವಾದವೇ ಪ್ರಬಲ ಶಕ್ತಿ. ಆದ್ದರಿಂದಲೇ ಬಾನು ಮುಷ್ತಾಕರಷ್ಟೇ ಅನುವಾದಕಿ ದೀಪ ಬಸ್ತಿ ಮುಖ್ಯರಾಗುತ್ತಾರೆ. ವಿಶೇಷವಾಗುತ್ತಾರೆ.ಏಕೆಂದರೆ ಭಾಷಾಂತರ ಅಥವಾ ಅನುವಾದ ಎಂದರೆ ಭಾಷೆಯ ಹೊದಿಕೆ ಬದಲಾಯಿಸುವುದಲ್ಲ.
ಸಾಹಿತ್ಯದಲ್ಲಿ ಭಾಷಾಂತರ ಎಂದರೆ ಮೂಲ ಕೃತಿಯನ್ನು ಅದರ ಸಂವೇದನಾ ತೀವ್ರತೆ ಕೆಡದೇ ಅದೇ ಭಾವದಚ್ಚಿನಲ್ಲಿ ಕಟ್ಟಿಕೊಡುವುದು. ಹೀಗಾಗಬೇಕಿದ್ದರೆ ಮೂಲ ಲೇಖಕಿಯ ಸಾಂಸ್ಕೃತಿಕ ಪರಿಸರ ಪ್ರಭಾವದ ಅರಿವು ಮತ್ತು ಅವರ ಅಭಿವ್ಯಕ್ತಿಯ ಆಶಯ ಅನುವಾದಕಿಯದ್ದೂ ಆಗಿರಬೇಕು.

ಈಗ ಬಾನು ಮುಷ್ತಾಕರ “ಎದೆಯ ಹಣತೆ” ‘ಹಾರ್ಟ್ ಲ್ಯಾಂಪ್’ ಆಗಿ ಜಗದ ಬೆಳಕಾಗಿದೆ, ಓದುಗ ಲೋಕದ ಕಣ್ಣೊರೆಸಿದೆ..
ಈ ಪ್ರಕ್ರಿಯೆಯ ಹಿಂದೆ ಕಥಾನುವಾದಕಿಯ ಪರಿಶ್ರಮದ ಬೆವರು ಪರಿಮಳಿಸುತ್ತಿದೆ. ಅದು ಕನ್ನಡ ನೆಲದ ಮಹಿಳಾ ಲೇಖಕಿಯರ
ಮನೋಬಲದ ಸಾಮರ್ಥ್ಯಕ್ಕೆ ಸಂಕೇತವಾಗಿದೆ. ಮಹಿಳೆಯರದ್ದು ಅಡುಗೆ ಮನೆ ಸಾಹಿತ್ಯ ಎಂದು ಮೂದಲಿಸುತ್ತಲೇ ಬಂದವರ ಮುಖಕ್ಕೊಂದು ಮಂಗಳಾರತಿಯೂ ಹೌದು!
ಇದು ಜಾಗತೀಕರಣದ ಹೊಡೆತದಿಂದ ಕನ್ನಡ ಸಹಿತ ಜಗತ್ತಿನ ಎಲ್ಲ ಪ್ರಾದೇಶಿಕ ಭಾಷೆಗಳೂ ನಿರ್ಲಕ್ಷ್ಯ, ನಿರಭಿಮಾನದಿಂದ ಅವಗಣನೆಗೆ ಬಲಿಪಶುವಾಗುವ ಕಾಲ. ಇಂಥ ಕಾಲದಲ್ಲಿ ಜಾಗತಿಕ ಭಾಷೆಗಳ ನಡುವೆ ಕನ್ನಡದ ಕತೆಗಾರ್ತಿ ಬಾನು ಮುಷ್ತಾಕ್ ತನ್ನ ಪರಿಸರದಿಂದ ಹೆಕ್ಕಿ ಕಟ್ಟಿದ ಕತೆಗಳು ಜಾಗತಿಕವಾಗಿ ಮಹಿಳಾ ಧ್ವನಿ ಮೊಳಗಿಸುತ್ತದೆ ಎಂದರೆ..?
ಕನ್ನಡದ ಸಾಂಸ್ಕೃತಿಕ ಆಲೋಚನೆಗಳು ಸಭ್ಯತೆಯಿಂದ ಬಲಿಷ್ಠವಾಗಿದೆ ಎಂದೇ ಅರ್ಥ. ಇದು ಕನ್ನಡ ಕಥಾ ಕಣಜ ಸೀಮೋಲ್ಲಂಘನೆ ಮಾಡಿದ ಹೊತ್ತು. ಕಥೆ ಎಂದರೆ ರಂಜನೆಯಷ್ಟೇ ಅಲ್ಲ..ಅದು ಹಸಿಯಾದ ಸಾಂಸ್ಕೃತಿಕ ಪರಿಸರದ ಜೀವನಕ್ರಮವನ್ನು ಕಟ್ಟಿಡುವ ಅಕ್ಷರಗಳ ಸಾಕ್ಷ್ಯಚಿತ್ರ. ಆದ್ದರಿಂದಲೇ ಬಾನು ಮುಷ್ತಾಕರ ಕತೆಗಳು , ಅದರ ಹೋರಾಟದ ನೆಲೆಗಳು ಹೊಸ ಪೀಳಿಗೆಯ ಬರಹಗಾರರಿಗೊಂದು ದಾರಿದೀಪವಾಗಿದೆ. ಏಕೆ ಬರೆಯಬೇಕು ಮತ್ತು ಹೇಗೆ ಬರೆಯಬೇಕೆಂಬುದಕ್ಕೂ ಕೈ ದೀವಟಿಗೆಯಾಗಿದೆ..

ಮೊನ್ನೆ ಮೊನ್ನೆ 21ರ ನಡುರಾತ್ರಿ ದೀಪಾ ಬಸ್ತಿ ಮತ್ತು ಬಾನು ಮುಷ್ತಾಕ್ ಜಾಗತಿಕ ಬೂಕರ್ ಪ್ರಶಸ್ತಿ,ವೇದಿಕೆ ಯಲ್ಲಿ ಭಾರತದ ಸೀರೆಯನುಟ್ಟು “ಹಚ್ಚೇವು ಕನ್ನಡದ ದೀಪ” ಎಂದುಲಿದಾಗ ಒಂದು ಇತಿಹಾಸ ಸೃಷ್ಟಿಯಾಗಿದೆ. ಈ ವರೆಗಿನ ಸಾಹಿತ್ಯ ದಿಗ್ಗಜರಿಂದಾಗದ ಸಾಧನೆ ನಿರ್ಮಾಣವಾಗಿದೆ. ಅದುವೇ ಕನ್ನಡಕ್ಕೆ ಮೊದಲ ‘ಬೂಕರ್’, ಮತ್ತು ಇತಿಹಾಸದಲ್ಲೇ ಮೊದಲ ಬಾರಿಗೆ ಸಣ್ಣ ಕಥಾ ಪ್ರಾಕಾರಕ್ಕೆ ಬೂಕರ್..!
ಯಾವುದೇ ಕತೆಗಳು ಚಿಕ್ಕದಲ್ಲ ಎನ್ನುತ್ತಲೇ ಈ ಉಭಯ ಜೋಡಿಗಳು ಪ್ರಶಸ್ತಿಯನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಕನ್ನಡನಾಡಿನ ಸಾಹಿತ್ಯ ವಲಯ, ಭಾರತೀಯ ಮನಸುಗಳಲ್ಲಿ ಇದೊಂದು ನಿಜದ ಸಾಧನೆಯ ಸಂಭ್ರಮವಾಗಿಸಿದೆಯಾ?? ನಮ್ಮ ದೇಶ ಸಂಭ್ರಮಿಸಿದೆಯಾ..?
ಸಂಭ್ರಮಿಸಬೇಕಾದರೆ ಮೌಲ್ಯ ಅರ್ಥವಾಗಬೇಕು.ಕನ್ನಡದ ಮುದ್ರಣ ಮಾಧ್ಯಮ, ಚಿಂತಕರು ಸಂಭ್ರಮಿಸಿದ್ದು ಬಿಟ್ಟರೆ ಬಹುತೇಕ ಮಂದಿಗೆ ಇದು ನಮ್ಮ ಸಂಭ್ರಮ ಎಂದೆನಿಸಲಿಲ್ಲ ಯಾಕೆ ?ಇವರು ಕಟ್ಟಿಕೊಟ್ಟ ಕಥಾ ಬುತ್ತಿಯಲ್ಲಿರುವುದು ನಮ್ಮ ನಾಡಿನ ಊರೂರ ಮಹಿಳೆಯರ ಕಂಬನಿಯ ಕಥನ ನೆನಪಿರಲಿ..ಇಷ್ಟಕ್ಕೂ ಬಾನು ಬರೆದುದೆಲ್ಲವೂ ಮಹಿಳೆಯರನ್ನು ಕಟ್ಟಿ ಹಾಕಲು ಹೊಂಚು ಹಾಕಿದವರ ವಿರುದ್ಧ ಸೆಟೆದು ನಿಂತವರ ಕಥೆಗಳನ್ನು…!

(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು. ಕಣಿಪುರ ಡಿಜಿಟಲ್ ಮೀಡಿಯಾದ ಸಂಪಾದಕರು).