*ಗಣೇಶ್ ಮಾವಂಜಿ.
ಬಡವನೊಬ್ಬ ಭಾರೀ ಕಷ್ಟದಲ್ಲಿ ಮನೆ ಕಟ್ಟಿಸಿರುತ್ತಾನೆ.ಎಷ್ಟೋ ವರ್ಷಗಳ ಕನಸೊಂದು ನನಸಾಗುವ ಹಂತದಲ್ಲಿ ಇನ್ಯಾರೋ ಬಂದು ‘ನೀವೇಕೆ ಮನೆ ಕಟ್ಟಲು ಈ ಜಾಗ ಆಯ್ಕೆ ಮಾಡಿಕೊಂಡಿರಿ? ಉತ್ತರದಲ್ಲಿ ಅದು ಇದ್ದದ್ದನ್ನು ನೀವು ನೋಡಿಲ್ಲವೇ? ಅದಲ್ಲದೆ ದಕ್ಷಿಣದಲ್ಲಿ ಇದು ಇದೆ. ಪೂರ್ವದಲ್ಲಿ ಸೂರ್ಯ ಉದಯಿಸುವ ಜಾಗದಲ್ಲಿ ಮುಂಬಾಗಿಲು ಇಲ್ಲದಿದ್ದರೆ ದೇವರ ಕೃಪೆ ಒದಗಿ ಬರುವುದಂತೂ ಹೇಗೆ?’ ಎಂದು ಆತನ ತಲೆಯಲ್ಲಿ
ಹುಳ ಬಿಡುತ್ತಾರೆ. ತಲೆಗೆ ಹುಳ ಬಿಟ್ಟ ವ್ಯಕ್ತಿ ಅಷ್ಟು ಹೇಳಿ ‘ ನಾನು ಗೊತ್ತಿದ್ದದ್ದನ್ನು ಹೇಳಿದ್ದು..ಮತ್ತೆ ನಿಮ್ಮಿಷ್ಟ’ ಎಂದು ಹೇಳಿ ಚಪ್ಪಲಿ ಮೆಟ್ಟಿ ನಡೆದೇ ಬಿಡುತ್ತಾನೆ. ಇಂತಹ ಪುಕ್ಕಟೆ ಸಲಹೆಗಳು ಕೇಳಿಸಿಕೊಂಡಾತನನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ.
ಅಲ್ಲಿಯವರೆಗೆ ಎಲ್ಲವೂ ಸರಿಯಾಗಿದ್ದ ಆ ಬಡವನ ಮನಸ್ಸು ಗೊಂದಲದ ಗೂಡಾಗುತ್ತದೆ. ಹೊಟ್ಟೆಗೂ ಸರಿಯಾಗಿ ತಿನ್ನದೆ ಅಷ್ಟಿಷ್ಟು ಕೂಡಿಟ್ಟು ಒಟ್ಟುಗೂಡಿಸಿದ ಹಣದಲ್ಲಿ, ಅದೂ ಸಾಲದಾದಾಗ ಸಾಲ ಮಾಡಿ ಮನೆಯೊಂದು ಎದ್ದು ನಿಂತಾಗ ಯಾರೋ ಬಂದು ‘ವಾಸ್ತು’ ಎಂಬ ಹೆಸರಿನಲ್ಲಿ ಅದೇನೋ ಹೇಳಿಬಿಡುತ್ತಾರೆ. ಒಂದು ವೇಳೆ ಒಳಿತಿಗಾಗಿ ಹೇಳಿದ್ದಾರೆ ಎಂದಂದುಕೊಂಡು ಕಟ್ಟಿದ ಮನೆಯನ್ನು ಕೆಡವಲು ಹೊರಟರೆ ಇನ್ನಷ್ಟು ಸಾಲಗಾರನಾಗಬೇಕಾಗುತ್ತದೆ. ಹೇಳಿದ್ದನ್ನು ಕೇಳದೆ ಮುಂದುವರಿದರೆ ‘ಅಹಂಕಾರಿ’ ಎನಿಸಿಕೊಳ್ಳಬೇಕಾಗುತ್ತದೆ.

ಅವರಿವರ ಜೊತೆ ಕೇಳಿ ಒಂದಷ್ಟು ತಪ್ಪನ್ನು ಸರಿಪಡಿಸಿಕೊಂಡು ‘ತೊಂದರೆ ಇಲ್ಲ’ ಎನ್ನುವಷ್ಟು ವಾಸ್ತುಗೆ ಶರಣಾಗಿ ಗೃಹ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಆಗುತ್ತದೆ ಎಂದಿಟ್ಟುಕೊಳ್ಳೋಣ. ಮನೆ ಒಕ್ಕಲಿನ ದಿನ ಹಾಲುಕ್ಕಿಸಿ ಸತ್ಯನಾರಾಯಣ ಪೂಜೆಯ ನೈವೇದ್ಯ ಬಾಯಿಗಿಟ್ಟು ಕರಗುವ ಮುನ್ನ ಬಂದವರೊಬ್ಬರು ಎದುರಾಗಿ ಅಭಿಪ್ರಾಯ ಮಂಡಿಸುತ್ತಾರೆ. ‘ಎಲ್ಲ ಸರಿಯಾಗಿದೆ. ನೀವೇಕೆ ಬಿಳಿಯ ಟೈಲ್ಸ್ ಹಾಕಿದಿರಿ? ಬೇಗ ಮಣ್ಣಾಗುತ್ತದೆ. ಮತ್ತೆ ಕಿಚನ್ನಲ್ಲಿ ಒಲೆ ಹಾಗೇಕೆ ಹಾಕಿದ್ದೀರಿ? ಸ್ವಲ್ಪ ಎತ್ತರ ಬೇಕಿತ್ತು. ಅಷ್ಟೂ ಗೊತ್ತಾಗಲಿಲ್ಲವೇ?’ ಎಂದು ತನ್ನ ಬಾಯಿ ಚಪಲ ತೀರಿಸಿಕೊಳ್ಳುತ್ತಾರೆ.
ಹೊಟ್ಟೆ ತುಂಬಾ ಊಟ ಮಾಡಿ ಎಲೆ ಅಡಿಕೆ ಬಾಯಿಗೆ ಹಾಕಿ ಜಗಿದು ಉಗುಳುವ ಧಾವಂತದಲ್ಲಿದ್ದ ಮತ್ತೊಬ್ಬರು ‘ ಅದಾದರೂ ಪರವಾಗಿಲ್ಲ. ಎದುರಿನ ಸಿಟೌಟಿಗೆ ನೀವೇಕೆ ಸ್ಟೀಲ್ ಗ್ರಿಲ್ಸ್ ಹಾಕಿದ್ದೀರಿ? ಅದು ಕಾಸ್ಟ್ಲಿ ಅಲ್ವಾ? ಈಗೆಲ್ಲವೂ ಸಿಮೆಂಟಿನಲ್ಲೇ ತಯಾರಿಸಿದ ವಸ್ತುಗಳು ಬೇಕಾದ ಡಿಸೈನಿನಲ್ಲಿ ಸಿಗುತ್ತವೆ. ನನ್ನಲ್ಲೊಂದು ಮಾತು ಹೇಳಿದ್ದರೆ ನಾನು ನನ್ನ ಪರಿಚಯದವರ ಹತ್ತಿರ ಹೇಳಿ ಕಡಿಮೆಗೆ ಕೊಡಿಸುತ್ತಿದ್ದೆ’ ಎಂದು ಬಿಡುತ್ತಾರೆ. ಮೊದಲಿನವನ ಅಭಿಪ್ರಾಯ ಕೇಳಿ ತಲೆ ಕೆಡಿಸಿಕೊಂಡು ‘ಸೋತುಬಿಟ್ಟೆ’ ಎಂದು ತಲೆಬಿಸಿಯಲ್ಲಿದ್ದ ಮನೆಯ ಯಜಮಾನನಿಗೆ ಈಗ ಎರಡನೆಯ ವ್ಯಕ್ತಿಯ ಮಾತು ಕೇಳಿ ಮತ್ತಷ್ಟು ಪಾತಾಳಕ್ಕೆ ಕುಸಿದ ಅನುಭವವಾಗುತ್ತದೆ.

ಮನೆ ಕಟ್ಟಿ ನೆಮ್ಮದಿಯ ದಿನಗಳನ್ನು ಕಳೆಯುವ ಕನಸು ಕಾಣುತ್ತಿದ್ದ ಅವರಿಗೆ ಇತರರ ಅಭಿಪ್ರಾಯ ಕೇಳಿ ನಾನು ತಪ್ಪು ಮಾಡಿಬಿಟ್ಟೆ ಎಂಬ ಭಾವ ಉಂಟಾಗಿಬಿಡುತ್ತದೆ. ಇನ್ನು ಏನು ಮಾಡುವುದು? ಆದದ್ದಾಗಲಿ.., ಎಂದುಕೊಂಡು ಹೊಸ ಮನೆಯಲ್ಲಿ ಜೀವನ ಕುಂಟುತ್ತಾ ಸಾಗುತ್ತಿರುತ್ತದೆ. ದಿನದ ಎಲ್ಲಾ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡುವ ಅವರಿಗೆ ಕಣ್ಮುಂದೆಯೇ ಗಡಿಯಾರ ಇರಬೇಕೆಂಬ ಇರಾದೆಯಿಂದ ಮನೆಯ ಪ್ರವೇಶ ದ್ವಾರದ ಮೇಲ್ಭಾಗದಲ್ಲೇ ದೊಡ್ಡ ಗಡಿಯಾರ ನೇತು ಹಾಕಿರುತ್ತಾರೆ. ಗಂಟೆಯ ಲೆಕ್ಕಾಚಾರದಲ್ಲಿ ಪ್ರತೀ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಉದ್ದೇಶದಿಂದ ಗಡಿಯಾರವನ್ನು ಸದಾ ಕಾಣಿಸುವಂತೆ ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ಅಳವಡಿಸಿದರೆ ಇನ್ಯಾರೋ ಬಂದವರು ‘ಯಾವತ್ತೂ ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ಗಡಿಯಾರ ನೇತು ಹಾಕಬಾರದು. ಅದು ಕ್ರಮ ಅಲ್ಲ’ ಎಂಬ ಉಪದೇಶ ಮಾಡುತ್ತಾರೆ. ಏಕೆ ಹಾಕಬಾರದು? ಅದಕ್ಕೆ ಕಾರಣ ಏನೆಂದು ಪ್ರಶ್ನಿಸಿದರೆ ‘ಅದೆಲ್ಲವೂ ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಂತಹ ಕ್ರಮ. ಅದನ್ನು ಧಿಕ್ಕರಿಸಿ ನಡೆಯುವುದು ಶ್ರೇಯಸ್ಕರವಲ್ಲ’ ಎಂಬ ಉತ್ತರ ಅವರಿಂದ ಸಿಗುತ್ತದೆ.
ಸತ್ತು ಸ್ವರ್ಗ ಸೇರಿದ ಹಿರಿಯರ ಫೊಟೋ ಕಣ್ಣೆದುರೇ ಇದ್ದರೆ ಅವರ ಆಶೀರ್ವಾದ ತಮ್ಮ ಮೇಲಿರುತ್ತದೆ ಎಂದು ಎದುರಿನ ಗೋಡೆಯ ಮೇಲೆ ನೇತಾಡಿಸಿದರೂ ಈ ರೀತಿಯ ಉಪದೇಶ ನೀಡುವವರ ಕಣ್ಣು ಅದರ ಮೇಲೆ ಬಿದ್ದೇ ಬೀಳುತ್ತದೆ. ‘ಗತಿಸಿದವರ ಫೊಟೋ ಎದುರಿಗೆ ಕಾಣಿಸುವಂತೆ ಇಡಬಾರದು. ಹಾಗೊಂದು ವೇಳೆ ಕಣ್ಣೆದುರೇ ಕಾಣಿಸುವಂತೆ ನೇತಾಡಿಸಿಬಿಟ್ಟರೆ ಅದು ಆ ಮನೆಗೆ ಅಶುಭವನ್ನೇ ತರುತ್ತದೆ. ಹಾಗಾಗಿ ಈಗಲೇ ಆ ಫೊಟೋ ತೆಗೆದು ಬೇರೆಲ್ಲಾದರೂ ಇಟ್ಟುಬಿಡಿ. ಇಲ್ಲದಿದ್ದರೆ ನಿಮಗೆ ಒಳಿತಿಲ್ಲ’ ಎಂಬ ಬೆದರಿಕೆಯ ಸಲಹೆ ನೀಡುತ್ತಾರೆ.
ಯಾವುದಾದರೂ ವಾಹನವನ್ನೋ ಅಥವಾ ಬೇರೇನಾದರೂ ವಸ್ತುಗಳನ್ನೋ ಕೊಂಡುಕೊಂಡರೆ ‘ಎಷ್ಟಾಯಿತು ಇದಕ್ಕೆ? ಸ್ವಲ್ಪ ಹೆಚ್ಚು ಕೊಟ್ಟಿದ್ದರೆ ಹೊಸತನ್ನೇ ತೆಗೆದುಕೊಳ್ಳಬಹುದಿತ್ತು. ನೀವೇಕೆ ಅಷ್ಟೊಂದು ಅವಸರ ಮಾಡಿಬಿಟ್ಟಿರಿ? ಎಂಬ ಪ್ರಶ್ನೆ ಬರುತ್ತದೆ. ಹೊಸತನ್ನು ಖರೀದಿಸಿದರೆ ‘ ಅಯ್ಯೋ…ನೀವೇಕೆ ಹೊಸತು ಕೊಳ್ಳಲು ಹೋದಿರಿ? ನನ್ನಲ್ಲಿ ಹೇಳಿದ್ದರೆ ನಿಮಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ತೆಗೆಸಿಕೊಡುತ್ತಿದ್ದೆ’ ಎನ್ನುತ್ತಾ ನೀವು ಗುಂಡಿಗೆ ಬಿದ್ದಿರಿ ಎಂಬ ಸಂದೇಶ ರವಾನಿಸುತ್ತಾರೆ.

ಜೀವನದ ಪ್ರತೀ ಹೆಜ್ಜೆಹೆಜ್ಜೆಯಲ್ಲೂ ಇಂತಹ ಪುಕ್ಕಟೆ ಸಲಹೆ ನೀಡುವ ವ್ಯಕ್ತಿಗಳು ಸಿಕ್ಕೇ ಸಿಗುತ್ತಾರೆ. ಕೊಡುವ ಸಲಹೆಗಳಲ್ಲಿ ಕೆಲವೊಂದಕ್ಕೆ ವೈಜ್ಞಾನಿಕ ಕಾರಣಗಳು ಇರಬಹುದಾದರೂ ಯಾರನ್ನೇ ಆಗಲಿ ಅಧೀರನನ್ನಾಗಿಸುವ ಸಲಹೆ ನೀಡುವುದು ತರವಲ್ಲ. ವಾಸ್ತು ಪ್ರಕಾರ ಮನೆ ಕಟ್ಟಿ ನಂತರ ಕೈಕಟ್ಟಿ ಕುಳಿತು ಇದ್ದ ಹಣವನ್ನು ಖರ್ಚು ಮಾಡುತ್ತಾ ಬೇಕಾಬಿಟ್ಟಿ ಜೀವನ ನಡೆಸುತ್ತಿದ್ದರೆ ಖಂಡಿತವಾಗಿಯೂ ಅಂತಹ ಕುಟುಂಬವನ್ನು ಸ್ವತಃ ದೇವರೇ ಬಂದರೂ ಉದ್ಧಾರ ಮಾಡಲಾರರು. ವಾಸ್ತು ಶಾಸ್ತ್ರ ಧಿಕ್ಕರಿಸಿದರೂ ಮೈಮುರಿದು ದುಡಿವ ಕುಟುಂಬಕ್ಕೆ ಸಿರಿತನ ಎಂದಿಗೂ ಗಗನ ಕುಸುಮ ಆಗಲಾರದು ಎಂಬ ಸತ್ಯವನ್ನೂ ಅರಿತುಕೊಳ್ಳಬೇಕು.
ಮನೆಯ ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ನೇತಾಡಿಸಿದ ಗಡಿಯಾರಕ್ಕೆ ಮೈಮುರಿದು ದುಡಿವ ವ್ಯಕ್ತಿಯ ಬೆವರ ಹನಿಗೆ ಸಿಗುವ ಪ್ರತಿಫಲವನ್ನು ಕಸಿಯುವ ತಾಕತ್ತು ಖಂಡಿತಾ ಇರಲಾರದು. ಹಿರಿಯರು ಜೀವಂತವಾಗಿದ್ದಾಗ ಕಾಲಕಸವಾಗಿಸಿ ಸತ್ತ ಬಳಿಕ ಅವರ ಹೆಸರಿನಲ್ಲಿ ನಾಲ್ಕೂರಿಗೆ ಬಾಡೂಟ ಬಡಿಸಿದರೂ ಆ ಹಿರಿಯರ ಆಶೀರ್ವಾದ ಸಿಗುವುದು ಅಷ್ಟರಲ್ಲೇ ಇದೆ.
ಹಾಗಿದ್ದರೂ ಅನಾದಿ ಕಾಲದಿಂದಲೂ ನಡೆದುಕೊಂಡ ಬಂದ ಹಿರಿಯರ ಕಟ್ಟುಪಾಡು, ನಂಬಿಕೆ, ಆಚರಣೆಗಳಿಗೆ ಅರ್ಥ ಇಲ್ಲ ಎಂದಲ್ಲ. ಕೆಲವೊಂದು ನಂಬಿಕೆಗಳಿಗೆ ವೈಜ್ಞಾನಿಕ ಕಾರಣಗಳೂ ಇವೆ. ಆದರೆ ನಂಬಿಕೆ, ಕಟ್ಟುಪಾಡು, ವಾಸ್ತು ಮುಂತಾದ ಹೆಸರಿನಲ್ಲಿ ಬಡವರ ಮೇಲೆ ಸವಾರಿ ಮಾಡುವ ಕೆಲಸ ಸರಿ ಅಲ್ಲ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು, ಅಂಕಣಕಾರರು)