ಮಂಗಳೂರು: ಮುಂಬರುವ ಮಂಗಳೂರು ದಸರಾ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಗೆ ಪ್ರವಾಸಿಗರನ್ನು ಆಕರ್ಷಿಸುವಂತೆ ಸಿದ್ಧತೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸೂಚಿಸಿದರು.ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಂಗಳೂರು ದಸರಾ ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದಸರಾದ ವಿದ್ಯುತ್ ದೀಪಾಲಂಕಾರ, ಸ್ವಚ್ಛತೆ, ಅಲಂಕಾರ ಸೇರಿದಂತೆ
ಮಂಗಳೂರು ನಗರದಲ್ಲಿ ಹಬ್ಬದ ವಾತಾವರಣ ಮೂಡುವಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಬೇಕು. ಕುದ್ರೋಳಿ ದೇವಸ್ಥಾನ, ಮಂಗಳಾದೇವಿ, ಉರ್ವಾ ಮಾರಿಯಮ್ಮ ಸೇರಿದಂತೆ ನಗರದಲ್ಲಿ ಪ್ರಮುಖ ದಸರಾ ನಡೆಯುವ ಸ್ಥಳಗಳ ಪ್ರಮುಖ ರಸ್ತೆಗಳಲ್ಲಿ, ಪ್ರಮುಖ ಜಂಕ್ಷನ್ಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಬೇಕು. ಎಲ್ಲ ಇಲಾಖೆಯವರು ಸಹಕಾರ ನೀಡಲು ಸಚಿವರು ಸೂಚಿಸಿದರು.ಟ್ರಾಫಿಕ್ ವ್ಯವಸ್ಥೆ ನಿರ್ವಹಿಸಲು ಸುಸಜ್ಜಿತ ವ್ಯವಸ್ಥೆಯೊಂದಿಗೆ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು.
ದಸರಾ ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಯಾವುದೇ ಅಡೆತಡೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ, ಸುಗಮ ಸಂಚಾರ ವ್ಯವಸ್ಥೆ ನಿರ್ವಹಿಸಬೇಕು. ಆರೋಗ್ಯ ಇಲಾಖೆ ವತಿಯಿಂದ 24/7 ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವಂತೆ ಸಚಿವರು ಸೂಚಿಸಿದರು. ದಸರಾ ಸಮಯದಲ್ಲಿ ಸಿಟಿ ಬಸ್ಗಳು ರಾತ್ರಿ ದೀರ್ಘಕಾಲದವರೆಗೆ ಸಂಚಾರ ನಡೆಸುವಂತೆ ಆರ್.ಟಿ.ಓ ಗಮನಹರಿಸಬೇಕು. ನಗರದಲ್ಲಿ ವಾಣಿಜ್ಯ ವ್ಯಾಪಾರ ಕೇಂದ್ರಗಳು ರಾತ್ರಿ ದೀರ್ಘಕಾಲದವರೆಗೆ ವ್ಯವಹಾರ ನಡೆಸುವಂತಾಗಬೇಕು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಮ್ ಪಾಂಡೆ ಮತ್ತಿತರರು ಇದ್ದರು.










