ಸುಳ್ಯ:ನಗರದಲ್ಲಿಯೇ ಇದ್ದರೂ ಸುಂದರ ಪ್ರಕೃತಿಯ ಮಧ್ಯೆ ಹಾದು ಹೋಗುವ ರಸ್ತೆ.. ಆದರೆ ಈ ರಸ್ತೆಯ ಪ್ರಯಾಣ ಮಾತ್ರ ಅಷ್ಟೇನು ಸುಂದರ ಮತ್ತು ಸುಖಕರವಾಗಿಲ್ಲ.. ಹೌದು ಇದು ಸುಳ್ಯದ ಬಹು ಉಪಯೋಗಿ ಹಳೆಗೇಟು- ಕೊಡಿಯಾಲಬೈಲು ರಸ್ತೆ. ಕಳೆದ 25 ವರ್ಷಗಳಿಂದ ಅಭಿವೃದ್ಧಿ, ಡಾಂಬರು, ಕಾಣದ ರಸ್ತೆ ಎಕ್ಕುಟ್ಟಿ ಹೋಗಿದ್ದು ಪ್ರಯಾಣಿಕರು ಪರದಾಡುವ ಸ್ಥಿತಿ ಇದೆ ನಿರ್ಮಾಣ ಆಗಿದೆ. ಅಲ್ಲಲ್ಲಿ ಆಳೆತ್ತರದ
ಹೊಂಡ ಗುಂಡಿ ನಿರ್ಮಾಣವಾಗಿರುವ ರಸ್ತೆಯ ಸ್ಥಿತಿ ಅಯೋಮಯವಾಗಿದೆ. ಹಳೆಗೇಟಿನಿಂದ ಕೊಡಿಯಾಲಬೈಲು- ದುಗ್ಗಲಡ್ಕ ರಸ್ತೆಗೆ ಸಂಧಿಸುವ ರಸ್ತೆ ಸುಮಾರು 2.5 ಕಿ.ಮಿ.ದೂರ ಇದೆ. ಅಗಲ ಕಿರಿದಾದ ಈ ರಸ್ತೆಯಲ್ಲಿ ವಿವಿಧ ಕಡೆಗಳಲ್ಲಿ ಭಾರೀ ಗಾತ್ರದ ಹೊಂಡಗಳೇ ತುಂಬಿದೆ.ಹೊಸಗದ್ದೆ ಕಟ್ಟೆ ಬಳಿಯಿಂದ ಕೊಡಿಯಾಲಬೈಲು-ದುಗ್ಗಲಡ್ಕ ರಸ್ತೆ ಸಂಪರ್ಕಿಸುವ ತನಕ ಕೆಲವು ಕಡೆ ರಸ್ತೆಯ ಡಾಮರು ಸಂಪೂರ್ಣ ಎದ್ದು ಹೋಗಿ ಕೆಸರಿನ ಕಚ್ಚಾ ರಸ್ತೆಯಾಗಿದೆ.ಕೆಲವೆಡೆ ಡಾಮರಿನ ಪಳೆಯುಳಿಕೆ ಮಾತ್ರ ಉಳಿದು ಕೊಂಡಿದೆ. ರಸ್ತೆಯ ಬೃಹದಾಕಾರದ ಹೊಂಡಗಳಲ್ಲಿ ಕೆಸರು ಮಿಶ್ರಿತ ನೀರು ತುಂಬಿಕೊಂಡಿದೆ. ಚರಂಡಿ ಇಲ್ಲದೆ ಮಳೆಯ ನೀರೆಲ್ಲ ರಸ್ತೆಯಲ್ಲಿಯೇ ಹರಿಯುತ್ತದೆ. ಮಳೆ ಬಂದರೆ ನೀರೆಲ್ಲ

ರಸ್ತೆಯಲ್ಲಿಯೇ ಶೇಖರಣೆಯಾಗಿ ರೋಡು ತೋಡಿನಂತಾಗುತ್ತದೆ.ಪ್ರತಿ ನಿತ್ಯ ನೂರಾರು ವಾಹನಗಳು ಓಡಾಡುವ ಬಹು ಉಪಯೋಗಿ ರಸ್ತೆ ಇದು.ಬೈಕ್, ಕಾರು, ರಿಕ್ಷಾ ಸೇರಿದಂತೆ ವಾಹನಗಳು ಹೊಂಡದಲ್ಲಿ ಇಳಿದು ಹತ್ತಿ ಪ್ರಯಾಣಿಸುವುದೇ ತ್ರಾಸದಾಯಕವಾಗಿದೆ.
ಈ ರಸ್ತೆ ಪೂರ್ತಿ ಡಾಮರು ಕಾಣದೆ ಸುಮಾರು 25 ವರ್ಷಗಳೇ ಕಳೆದಿದೆ ಎಂದು ಈ ಭಾಗದ ಜನರು ನೆನಪಿಸುತ್ತಾರೆ.ಸುಮಾರು 15 ವರ್ಷಗಳ ಹಿಂದೆ ಸ್ವಲ್ಪ ಭಾಗದಲ್ಲಿ ಡಾಮರು ಕಂಡಿದ್ದರೂ ಪೂರ್ತಿ ಭಾಗ ಅಭಿವೃದ್ಧಿ ಆಗದೆ ಎರಡೂವರೆ ದಶಕಗಳೇ ಸಂದಿದೆ.
ಬಹು ಮುಖ್ಯ ರಸ್ತೆ:
ಸುಳ್ಯ-ಜಟ್ಟಿಪಳ್ಳ- ಕೊಡಿಯಾಲಬೈಲು ರಸ್ತೆಯಂತೆಯೇ ಬಹು ಉಪಯೋಗಿ ರಸ್ತೆ ಹಳೆಗೇಟು- ಕೊಡಿಯಾಲಬೈಲು ರಸ್ತೆ. ಕೊಡಿಯಾಲಬೈಲು ಗೌಡ ಸಮುದಾಯ ಭವನ, ಸರಕಾರಿ ಪ್ರಥಮದರ್ಜೆ ಕಾಲೇಜು, ಹಾಸ್ಟೇಲ್ಗಳು ಸೇರಿದಂತೆ ವಿವಿಧ ಕಡೆಗಳಿಗೆ ಪ್ರಯಾಣಿಸಲು ಹಳೆಗೇಟು- ಕೊಡಿಯಾಲಬೈಲು ರಸ್ತೆ ಬಹು ಉಪಯೋಗಿ ರಸ್ತೆ. ದುಗ್ಗಲಡ್ಕ ಕಡೆಗೆ ಹೋಗಲೂ ಬಲು ಹತ್ತಿರ. ಈ ಭಾಗದ ಹಲವಾರು ಕುಟುಂಬಗಳಿಗೂ ಪ್ರಯಾಣಕ್ಕಾಗಿ ಈ ರಸ್ತೆಯೇ ಆಸರೆ.ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಬಹು ವರ್ಷಗಳ ಬೇಡಿಕೆ. ಕೇವಲ ಎರಡೂವರೆ ಕಿ.ಮಿ.ಇರುವ ಈ ರಸ್ತೆಯನ್ನು ಸ್ವಲ್ಪ ಅಗಲೀಕರಣ ಮಾಡಿ ಡಾಮರೀಕರಣ ಮಾಡಿದಲ್ಲಿ ನಗರಕ್ಕೊಂದು ಸುಂದರ ಸಂಪರ್ಕ ರಸ್ತೆ ಸೌಲಭ್ಯ

ದೊರೆಯಲಿದೆ. ಹೊಂಡ ಗುಂಡಿಯ ಮೇಲಿನ ಜನರ ನಿತ್ಯ ಸಂಚಾರದ ಸರ್ಕಸ್ಗೆ ಮುಕ್ತಿ ದೊರಕಲಿದೆ.ಸರಕಾರ, ಜನಪ್ರತಿನಿಧಿಗಳು ಗಮನ ಹರಿಸಿ ರಸ್ತೆಯ ಅಭಿವೃದ್ಧಿಗೆ ಪ್ರಯತ್ನ ನಡೆಸಬೇಕು ಎಂಬುದು ಈ ಭಾಗದ ಜನರ ಒಕ್ಕೊರಲ ಬೇಡಿಕೆ.
‘ಹಳೆಗೇಟು- ಕೊಡಿಯಾಲಬೈಲು ರಸ್ತೆ ಡಾಮರೀಕರಣ ಕಾಣದೆ ಸುಮಾರು 25 ವರ್ಷಗಳು ಕಳೆದಿದೆ. ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಎರಡೂವರೆ ಕಿ.ಮಿ.ರಸ್ತೆ ಅಭಿವೃದ್ಧಿಗೆ ಅನುದಾನ ಮೀಸಲಿರಿಸಿ ಅಭಿವೃದ್ಧಿ ಪಡಿಸಬೇಕು ಎಂಬುದು ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದೆ’
-ರಾಕೇಶ್ ಕುಂಠಿಕಾನ
ಜೆಡಿಎಸ್ ಪ್ರಧಾನ ಕಾರ್ಯದರ್ಶಿ
ಸುಳ್ಯ ತಾಲೂಕು.










