ಮಂಗಳೂರು:ಕಡಿಮೆ ಬಂಡವಾಳದಲ್ಲಿ ಅಣಬೆ ಬೇಸಾಯ ಕೈಗೊಂಡು, ಅಣಬೆಯಿಂದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಮೂಲಕ ರೈತರು ಹಾಗೂ ಮಹಿಳೆಯರು ಹೆಚ್ಚುವರಿ ಆದಾಯ ಗಳಿಸಬಹುದು ಎಂದು ಕೃಷಿ ವಿಜ್ಞಾನಿಗಳು ತಿಳಿಸಿದರು. ಭಾರತೀಯ ಕೃಷಿ ಸಂಶೋಧನಾ ಮಂಡಳಿ ಹಾಗೂ
ಕೃಷಿ ವಿಜ್ಞಾನ ಕೇಂದ್ರ (ದ.ಕ.), ಮಂಗಳೂರು, ಬ್ಯಾಂಕ್ ಆಫ್ ಬರೋಡಾ ಮತ್ತು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇವರ ಸಹಯೋಗದಲ್ಲಿ ‘ಅಣಬೆ ಬೇಸಾಯ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ಕಾರ್ಯಕ್ರಮ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಡಾ. ಕೇದಾರನಾಥ್, ಸಸ್ಯ ಸಂರಕ್ಷಣಾ ವಿಜ್ಞಾನಿಗಳು, ಡಾ. ಮಲ್ಲಿಕಾರ್ಜುನ ಎಲ್., ಮಣ್ಣು ವಿಜ್ಞಾನಿ, ಬ್ಯಾಂಕ್ ಆಫ್ ಬರೋಡಾದ ಮುಖ್ಯ ಪ್ರಬಂಧಕ ಮನೀಷ್ ಜೈಸ್ವಾಲ್, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿರಾಜ್, ಕೃಷಿ ವಿಜ್ಞಾನ ಕೇಂದ್ರದ ಡಾ. ಟಿ.ಜೆ. ರಮೇಶ್, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಡಾ.ಹರೀಶ್ ಶೆಣೈ, ಸಹಾಯಕ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ತರಬೇತಿಯಲ್ಲಿ ಅಣಬೆ ಬೇಸಾಯದ ವೈಜ್ಞಾನಿಕ ವಿಧಾನಗಳು, ಉತ್ಪಾದನೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ಗುಣಮಟ್ಟದ ಅಣಬೆ ಉತ್ಪಾದನೆ, ಕೊಯ್ಲೋತ್ತರ ನಿರ್ವಹಣೆ ಹಾಗೂ ಅಣಬೆಯಿಂದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕುರಿತು ಮಾಹಿತಿ ನೀಡಲಾಯಿತು. ರೈತರಿಗೆ ಪ್ರಾಯೋಗಿಕ ತರಬೇತಿಯನ್ನೂ ನೀಡಲಾಯಿತು.
ಸ್ಥಳೀಯವಾಗಿ ಲಭ್ಯವಿರುವ ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಅಣಬೆ ಉತ್ಪಾದಿಸುವ ವಿಧಾನ, ಕಡಿಮೆ ಬಂಡವಾಳದಲ್ಲಿ ಅಣಬೆ ಬೇಸಾಯ ಆರಂಭಿಸುವ ಅವಕಾಶ ಹಾಗೂ ಉತ್ಪಾದಿಸಿದ ಅಣಬೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಕುರಿತು ತರಬೇತಿಯಲ್ಲಿ ವಿವರಿಸಲಾಯಿತು.
ಅಣಬೆ ಬೇಸಾಯ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯನ್ನು ಗ್ರಾಮೀಣ ಮಹಿಳೆಯರು ಮತ್ತು ಸ್ವಸಹಾಯ ಸಂಘಗಳ ಸದಸ್ಯೆಯರು ಉದ್ಯಮವಾಗಿ ರೂಪಿಸಿಕೊಂಡು ಸ್ವಾವಲಂಬಿಗಳಾಗಬಹುದು ಎಂಬ ಕುರಿತು ಅರಿವು ಮೂಡಿಸಲಾಯಿತು.
ತರಬೇತಿಯ ತಾಂತ್ರಿಕ ಮಾಹಿತಿ ಮತ್ತು ಪ್ರಾಯೋಗಿಕ ಅವಧಿಯಲ್ಲಿ ಡಾ. ಚಂದ್ರಶೇಖರ ಸಿ.,ಡಾ. ಧರಣೇಶ್ ಎನ್.ಕೆ., ಡಾ. ಹರೀಶ್ ಶೆಣೈ, ಡಾ. ಮಲ್ಲಿಕಾರ್ಜುನ ಎಲ್. ಸೇರಿದಂತೆ ಕೃಷಿ ವಿಜ್ಞಾನಿಗಳು ಮಾಹಿತಿ ನೀಡಿದರು. ಪ್ರಗತಿಪರ ಅಣಬೆ ಕೃಷಿಕರಾದ ಪಾಂಡುರಂಗ ಹಾಗೂ ಉದ್ಯಮಿ ತುಷಾರ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ರೈತರು, ಪ್ರಗತಿಪರ ಕೃಷಿಕರು, ಸಂಜೀವಿನಿ–ಎನ್ಆರ್ಎಲ್ಎಂ ಕೃಷಿ ಸಖಿಯರು, ಎಲ್ ಸಿ ಆರ್ ಪಿ ಹಾಗೂ ಸದಸ್ಯೆಯರು ಸೇರಿದಂತೆ, ಮಡಿಕೇರಿ, ಕಾಸರಗೋಡು ಭಾಗದ ಆಸಕ್ತ ಕೃಷಿಕರು ಭಾಗವಹಿಸಿದ್ದರು.







