ಸುಳ್ಯ:ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಜೂ.21ರಂದು ಚುನಾವಣೆ ನಡೆದ ಎಲ್ಲಾ 9 ಸ್ಥಾನಗಳಲ್ಲಿಯೂ ಸಹಕಾರ ಭಾರತಿಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಎರಡು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು.ಒಟ್ಟು 11 ಸ್ಥಾನಗಳೊಂದಿಗೆ ಸಹಕಾರ ಭಾರತಿ ಆಡಳಿತ ಹಿಡಿದಿದೆ. ಅಜ್ಜಾವರ ಹಾಲು ಸೊಸೈಟಿಯ ಒಟ್ಟು
13 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು 7 ಸಾಮಾನ್ಯ ಮತ್ತು 2 ಮಹಿಳಾ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಎರಡು ಅವಿರೋಧ ಆಯ್ಕೆ ನಡೆದರೆ, ಎರಡು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಸಾಮಾನ್ಯ 7 ನಿರ್ದೇಶಕ ಸ್ಥಾನಕ್ಕೆ 12 ಮಂದಿ, 2 ಮಹಿಳಾ ಮೀಸಲು ಸ್ಥಾನಕ್ಕೆ 3 ಮಂದಿ ನಾಮಪತ್ರ ಸಲ್ಲಿಸಿದ್ದರು.ಸಾಮಾನ್ಯ ಮೀಸಲು ಕ್ಷೇತ್ರದಿಂದ ಸಹಕಾರ ಭಾರತಿಯ ಕೆ.ಕೇಶವ, ನಾರಾಯಣ ಬಂಟ್ರಬೈಲು, ಪರಮೇಶ್ವರ ಎಸ್, ಬಾಲಕೃಷ್ಣ, ರಾಜ್ಕುಮಾರ್ ಅತ್ಯಾಡಿ, ರೇಖಾ ಜಯರಾಮ, ಲವಕುಮಾರ್ ಹಾಗು ಮಹಿಳಾ ಮೀಸಲು ಸ್ಥಾನದಿಂದ ಧನ್ಯ, ನಳಿನಾಕ್ಷಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ್ದ ಹಾಲು ಸೊಸೈಟಿಯ ಹಾಲಿ ಅಧ್ಯಕ್ಷ ರಾಹುಲ್ ಅಡ್ಪಂಗಾಯ, ಜನಾರ್ಧನ, ಬಾಲಚಂದ್ರ, ಯತಿರಾಜ ಅಡ್ಪಂಗಾಯ, ಸುಲೋಚನ ಹಾಗೂ ಮಹಿಳಾ ಸ್ಥಾನದಿಂದ ಸ್ಪರ್ಧಿಸಿದ್ದ ಶ್ವೇತಾ ಪುರುಷೋತ್ತಮ ಪರಾಭವಗೊಂಡಿದ್ದಾರೆ.
ಹಿಂದುಳಿದ ವರ್ಗ ಎ. ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಅಭ್ಯರ್ಥಿ ಗುರುರಾಜ್ ಅಜ್ಜಾವರ ಹಾಗೂ ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಅಭ್ಯರ್ಥಿ ದಯಾನಂದ ಅಡ್ಪಂಗಾಯ ಅವಿರೋಧವಾಗಿ ಆಯ್ಕೆಯಾಗಿದ್ದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಈ ಮಧ್ಯೆ ಹಾಲಿ ಅಧ್ಯಕ್ಷ ರಾಹುಲ್ ಅಡ್ಪಂಗಾಯ ನೇತೃತ್ವದ ತಂಡ
ಚುನಾವಣಾಧಿಕಾರಿಗಳಿಗೆ ಪತ್ರ ಬರೆದು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು ಮತ್ತು ಅವರ ತಂಡ ಜೂ.21ರಂದು ನಡೆದ ಮತದಾನದಲ್ಲಿ ಭಾಗವಹಿಸಿಲ್ಲ.







