ಸುಳ್ಯ:ಆಧಾರ್ ಕಾರ್ಡ್ ಎಂಬುದು ಈಗ ಪ್ರತಿಯೊಬ್ಬರ ಆಧಾರ. ಸರಕಾರಿ ಮತ್ತಿತರ ಎಲ್ಲಾ ಅಗತ್ಯತೆಗಳಿಗೂ ಆಧಾರ್ ಕಾರ್ಡ್ ಪ್ರಮುಖ ದಾಖಲೆ. ಆಧಾರ್ ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಆದರೆ ಆಧಾರ್ ಕಾರ್ಡ್ ಮಾಡಿಸಲು, ಆಧಾರ್ ಅಪ್ಡೇಟ್ ಮಾಡಲು, ತಿದ್ದುಪಡಿ ಮಾಡಬೇಕೆಂದರೆ ಸುಳ್ಯದಲ್ಲಿ ಆಧಾರ್ ಕೇಂದ್ರಗಳೇ ಇಲ್ಲ. ಕಳೆದ ಹಲವು ತಿಂಗಳಿನಿಂದ ಆಧಾರ್ ಕೇಂದ್ರಗಳಿಲ್ಲದ ಕಾರಣ
ಆಧಾರ್ ಕಾರ್ಡ್ ಮಾಡಿಸಲು, ತಿದ್ದುಪಡಿ, ಅಪ್ಡೇಟ್ ಮಾಡಲು ಜನರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಧಾರ್ ಸಂಬಂಧಿತ ಸಮಸ್ಯೆಗಳು ಬಂದರೆ ಏನು ಮಾಡುವುದು ಎಂದೇ ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲವು ಮಂದಿ ಸಾರ್ವಜನಿಕರು ಆಧಾರ್ ಆಗದೆ, ಅಪ್ಡೇಷನ್, ತಿದ್ದುಪಡಿ ಮಾಡಲಾಗದ ಬಗ್ಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಮೊದಲು ಕೆಲವು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ, ಅಂಚೆ ಕಚೇರಿಗಳಲ್ಲಿ, ತಾಲೂಕು ಪಂಚಾಯತ್ನ ಆಧಾರ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಮಾಡಲು, ತಿದ್ದುಪಡಿಗೆ, ಅಪ್ಡೇಷನ್ಗೆ ಸುಳ್ಯದಲ್ಲಿಯೂ ಅವಕಾಶ ಇತ್ತು. ಆದರೆ ಕಳೆದ ಕೆಲವು ತಿಂಗಳಿನಿಂದ ಎಲ್ಲಿಯೂ ಆಧಾರ್ ಕಾರ್ಡ್ನ ಕೆಲಸಗಳು ನಡೆಯುತ್ತಿಲ್ಲ. ಸುಳ್ಯದ ಪ್ರಧಾನ ಅಂಚೆ ಕಚೇರಿಯಲ್ಲಿ ಆಧಾರ್ ಮಾಡಲು, ತಿದ್ದುಪಡಿಗೆ, ಅಪ್ಡೇಷನ್ಗೆ, ಬಯೋಮೆಟ್ರಿಕ್ಗೆ ಅವಕಾಶ ಇತ್ತು. ಆದರೆ ಆಧಾರ್ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ವರ್ಗಾವಣೆ ಆದ ಬಳಿಕ ಅಲ್ಲಿ ಸ್ಥಗಿತಗೊಂಡಿದೆ. ಕಳೆದ 5-6 ತಿಂಗಳಿನಿಂದ ಇಲ್ಲಿ ಕೆಲಸ ಆಗ್ತಾ ಇಲ್ಲ. ಯುಐಡಿಎಐ ಯವರು ಪರೀಕ್ಷೆ ನಡೆಸಿ ಹೊಸ ಸಿಬ್ಬಂದಿ ನೇಮಕ ಮಾಡಿದರೆ ಮಾತ್ರ ಆಧಾರ್ ಸಂಬಂಧಿತ ಕೆಲಸ ಮಾಡಲು ಸಾಧ್ಯ ಎನ್ನುತ್ತಾರೆ ಅಂಚೆ ಕಚೇರಿಯ ಅಧಿಕಾರಿಗಳು.

ತಾಲೂಕು ಪಂಚಾಯತ್ನಲ್ಲಿ ಆಧಾರ್ ಕೇಂದ್ರ ಕಾರ್ಯಾಚರಿಸುತ್ತಿತ್ತು. ಆದರೆ ಅಲ್ಲಿ ಕೆಲವೊಂದು ತಿದ್ದುಪಡಿ, ಅಪ್ಡೇಷನ್ಗೆ ಅಸ್ಟೇ ಸೀಮಿತವಾಗಿತ್ತು. ಆದರೆ ಕಳೆದ ಕೆಲವು ತಿಂಗಳಿನಿಂದ ಅದು ಕೂಡ ಬಂದ್ ಆಗಿದೆ.
ಸುಳ್ಯ ತಾಲೂಕಿನಲ್ಲಿ ಬೆಳ್ಳಾರೆಯಲ್ಲಿ ಆಧಾರ್ ಕೇಂದ್ರ ಕಾರ್ಯಾಚರಿಸುತ್ತಿದ್ದು ಸುಳ್ಯ ನಗರದ ಹಾಗೂ ಗ್ರಾಮೀಣ ಭಾಗದವರು ಬೆಳ್ಳಾರೆಯನ್ನು ಅವಲಂಬಿಸಬೇಕಾಗಿ ಬಂದಿದೆ. ಆದರೆ ಸುಳ್ಯದವರಿಗೆ ಆಧಾರ್ ಸಂಬಂಧಿಸಿದ ಕೆಲಸಕ್ಕೆ ಬೆಳ್ಳಾರೆ ಅಥವಾ ಪುತ್ತೂರು ಕೇಂದ್ರಕ್ಕೆ ತೆರಳುವುದು ತ್ರಾಸದಾಯಕವಾಗಿದೆ. ಆದುದರಿಂದ ಸುಳ್ಯದಲ್ಲಿಯೇ ಆಧಾರ್ ಕೇಂದ್ರವನ್ನು ಪುನರಾರಂಭ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸುಳ್ಯದಲ್ಲಿ ಅತೀ ಅಗತ್ಯವಾಗಿ ಆಧಾರ್ ಕೇಂದ್ರ ಆರಂಭ ಆಗಬೇಕು ಎಂಬುದು ಜನರ ಒಕ್ಕೊರಲ ಬೇಡಿಕೆ. ಹಲವು ಮಂದಿ ಸಾರ್ವಜನಿಕರು, ಜನಪ್ರತಿನಿಧಿಗಳು ಸುಳ್ಯದಲ್ಲಿ ಆಧಾರ್ ಕೇಂದ್ರ ಆರಂಭ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.
‘ಸುಳ್ಯ ನಗರದಲ್ಲಿ ಆಧಾರ್ ಕೇಂದ್ರ ಆರಂಭ ಮಾಡಲು ಪ್ರಯತ್ನ ನಡೆಸುತ್ತಿದ್ದೇನೆ. ಈ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಲಾಗುತ್ತಿದೆ.
-ಭಾಗೀರಥಿ ಮುರುಳ್ಯ.
ಶಾಸಕರು ಸುಳ್ಯ.
‘ಸುಳ್ಯ ತಾಲೂಕು ಕೇಂದ್ರಕ್ಕೆ ಆಧಾರ್ ಕೇಂದ್ರ ಆರಂಭ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಬೇಡಿಕೆ ಸಲ್ಲಿಸಲಾಗಿದೆ.
-ಮಂಜುಳಾ ಎಂ.
ತಹಶೀಲ್ದಾರ್ ಸುಳ್ಯ.