ಬಾರ್ಬಾಡೋಸ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್ ಎಂಟರ ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಅಮೆರಿಕ ವಿರುದ್ಧ ಆತಿಥೇಯ ವೆಸ್ಟ್ ಇಂಡೀಸ್ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.ಬಾರ್ಬಾಡೋಸ್ನ ಬ್ರಿಡ್ಜ್ಟೌನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಮೆರಿಕ, 19.5 ಓವರ್ಗಳಲ್ಲಿ
128 ರನ್ಗಳಿಗೆ ಆಲೌಟ್ ಆಯಿತು. ವಿಕೆಟ್ ಕೀಪರ್ ಬ್ಯಾಟರ್ ಆ್ಯಂಡ್ರಿಸ್ ಗೌಸ್ ಗರಿಷ್ಠ 29 ರನ್ ಗಳಿಸಿದರು. ನಾಯಕ ಆ್ಯರೋನ್ ಜೋನ್ಸ್ (11), ಸ್ಟೀವನ್ ಟೇಲರ್ (2), ನಿತೀಶ್ ಕುಮಾರ್ (20), ಕೋರಿ ಆ್ಯಂಡರ್ಸನ್ (7) ವೈಫಲ್ಯ ಅನುಭವಿಸಿದರು.
ವಿಂಡೀಸ್ ಪರ ಆ್ಯಂಡ್ರೆ ರಸೆಲ್ ಹಾಗೂ ರೋಸ್ಟನ್ ಚೇಸ್ ತಲಾ ಮೂರು ಮತ್ತು ಅಲ್ಜಾರಿ ಜೋಸೆಪ್ ಎರಡು ವಿಕೆಟ್ ಗಳಿಸಿ ಮಿಂಚಿದರು.ಈ ಗುರಿ ಬೆನ್ನಟ್ಟಿದ ಕೆರೆಬಿಯನ್ ಪಡೆ ಕೇವಲ 10.5 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಶಾಯ್ ಹೋಪ್ 39 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಅಬ್ಬರಿಸಿದರು. ಅವರ ಇನಿಂಗ್ಸ್ನಲ್ಲಿ ಎಂಟು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳು ಸೇರಿದ್ದವು. ನಿಕೋಲಸ್ ಪೂರನ್ 27* ಹಾಗೂ ಜಾನ್ಸನ್ ಚಾರ್ಲ್ಸ್ 15 ರನ್ ಗಳಿಸಿದರು.
ಸೂಪರ್ ಎಂಟರ ಹಂತದ ಎರಡನೇ ಗುಂಪಿನಲ್ಲಿ ಸೆಮಿಫೈನಲ್ಗಾಗಿ ನಿಕಟ ಪೈಪೋಟಿ ಏರ್ಪಟ್ಟಿದೆ. ದಕ್ಷಿಣ ಆಫ್ರಿಕಾ ಎರಡೂ ಪಂದ್ಯಗಳಲ್ಲಿ ಗೆದ್ದು ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವೆಸ್ಟ್ಇಂಡೀಸ್ ಹಾಗೂ ಇಂಗ್ಲೆಂಡ್ ಈವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಹಾಗೂ ಸೋಲು ಕಂಡಿದೆ. ಆದರೂ ಇಂಗ್ಲೆಂಡ್ಗಿಂತಲೂ ಉತ್ತಮ ರನ್ರೇಟ್ (+0.412) ಕಾಯ್ದುಕೊಂಡಿರುವ ವಿಂಡೀಸ್ (+1.814) ಎರಡನೇ ಸ್ಥಾನದಲ್ಲಿದೆ.ಆದರೆ ಸೂಪರ್ ಎಂಟರ ಹಂತಕ್ಕೆ ತಲುಪಿ ಇತಿಹಾಸ ರಚಿಸಿರುವ ಅಮೆರಿಕಕ್ಕೆ ಹಿನ್ನಡೆಯಾಗಿದೆ. ಆಡಿರುವ ಎರಡೂ ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.ಈ ಗುಂಪಿನಿಂದ ಎರಡು ತಂಡಗಳು ಸೆಮಿಫೈನಲ್ಗೆ ತೇರ್ಗಡೆ ಹೊಂದಲಿವೆ. ಹಾಗಾಗಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ವೆಸ್ಟ್ಇಂಡೀಸ್ ತಂಡಗಳ ನಡುವೆ ಯಾವೆಲ್ಲ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿವೆ ಎಂಬುದು ಕುತೂಹಲವೆನಿಸಿದೆ.