ದುಬೈ: ಮಹಿಳೆಯರ ಟಿ20 ವಿಶ್ವಕಪ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತ ತಂಡ ಟೂರ್ನಿಯಿಂದ ನಿರ್ಗಮಿಸಿದೆ. ಎ ಗುಂಪಿನಿಂದ ಅಗ್ರಸ್ಥಾನಿಯಾಗಿ ಆಸ್ಟ್ರೇಲಿಯಾ ಮತ್ತು ಎರಡನೇ ಸ್ಥಾನ ಪಡೆದ ನ್ಯೂಝಿಲೆಂಡ್ ಸೆಮಿಫೈನಲ್ ಪ್ರವೇಶಿಸಿವೆ.ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ
ನ್ಯೂಝಿಲೆಂಡ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು. ನ್ಯೂಝಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಜಯ ಗಳಿಸಿದಲ್ಲಿ ಭಾರತಕ್ಕೆ ಸೆಮಿಫೈನಲ್ಗೆ ಏರಲು ಅವಕಾಶ ಇತ್ತು.ಆದರೆ ಅಮೇಲಿಯಾ ಕೆರ್ರ್ (14ಕ್ಕೆ 3) ಮತ್ತು ಈಡನ್ ಕಾರ್ಸನ್ (7ಕ್ಕೆ 2) ಅವರ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ವನಿತೆಯರು ಕೇವಲ 11.4 ಓವರ್ ಗಳಲ್ಲಿ 56 ರನ್ಗಳಿಗೆ ಆಲ್ ಔಟ್ ಆಯಿತು. ನ್ಯೂಜಿಲೆಂಡ್ ತಂಡ 54 ರನ್ಗಳ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ, ಮುಂದಿನ ಹಂತಕ್ಕೇರುವ ಭಾರತದ ಕನಸು ನುಚ್ಚು ನೂರಾಯಿತು.ಎ ಗುಂಪಿನಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು 8 ಅಂಕ ಸಂಪಾದಿಸಿದ ಆಸ್ಟ್ರೇಲಿಯಾ ಹಾಗೂ ಮೂರು ಗೆಲುವಿನೊಂದಿಗೆ ಆರು ಅಂಕ ಪಡೆದ ನ್ಯೂಝಿಲೆಂಡ್ ಸೆಮಿಫೈನಲ್ ತಲುಪಿದವು.
ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿದ್ದು, ಭಾರತದ ಪಾಲಿಗೆ ದುಬಾರಿಯಾಯಿತು. ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಗೆಲುವಿಗೆ ತೃಪ್ತಿಪಟ್ಟುಕೊಂಡ ಭಾರತ ನಾಲ್ಕು ಅಂಕಗಳೊಂದಿಗೆ ಟೂರ್ನಿಯಿಂದ ನಿರ್ಗಮಿಸಿತು.
ತಮ್ಮ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ರನ್ಗಳಿಂದ ಸೋಲನುಭವಿಸಿ ಭಾರತದ ತಂಡ ನಿರಾಸೆ ಮೂಡಿಸಿತು.