ಸುಬ್ರಹ್ಮಣ್ಯ: ಸುಳ್ಯದಿಂದ ಆಲೆಟ್ಟಿ- ಬಂದಡ್ಕ- ಕಾಞಂಗಾಡ್- ಕಾಸರಗೋಡು ಮಾರ್ಗದಲ್ಲಿ ಕರ್ನಾಟಕ ಸಾರಿಗೆ ಬಸ್ ಪ್ರಾರಂಭಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಬಂದಡ್ಕದ
ಗಡಿನಾಡ ಕನ್ನಡಿಗರ ಸಂಘ ಮನವಿ ಸಲ್ಲಿಸಿತು. ಕಾಸರಗೋಡು ಜಿಲ್ಲೆಯ ಬಂದಡ್ಕ ಗ್ರಾಮವು ಗಡಿಪ್ರದೇಶವಾಗಿದ್ದು ಸುಳ್ಯ ತಾಲೂಕಿನಿಂದ ಸುಮಾರು 20 ಕೀ. ಮಿ ದೂರದಲ್ಲಿದೆ.ಇಲ್ಲಿ ಸುಮಾರು
500 ರಷ್ಟು ಕನ್ನಡಿಗರ ಮನೆಗಳಿದ್ದು ಇಲ್ಲಿನ ಜನರು ವಿಧ್ಯಾಬ್ಯಾಸ ಉದ್ಯೋಗ, ಆಸ್ಪತ್ರೆ, ವ್ಯಾಪಾರ-ವ್ಯವಹಾರ ಹಾಗೂ ಇನ್ನಿತರ ಮಾನವಿಯ ಸಂಬಂಧಗಳಿಗಾಗಿ ನಿರಂತರ ಸುಳ್ಯವನ್ನು ಸಂಪರ್ಕಿಸಬೇಕಾಗುತ್ತದೆ. ಉತ್ತಮ ರಸ್ತೆಯಿದ್ದು, ಇಲ್ಲಿ ಹಲವಾರು ವರ್ಷಗಳಿಂದ ದಿನನಿತ್ಯ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಗತ್ಯಗಳಿಗೆ ಖಾಸಗಿ ವಾಹನವನ್ನೇ ಅವಲಂಬಿಸಬೇಕಾಗಿದೆ.ಆದುದರಿಂದ ವಿದ್ಯಾಥಿಗಳು ಹಾಗೂ ಈ ನಾಡಿನ ಜನರ ಸೌಕರ್ಯಕ್ಕಾಗಿ ಅಂತರಾಜ್ಯ ಬಸ್ ವ್ಯವಸ್ಥೆಯನ್ನು ಒದಗಿಸಿಕೊಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಬಂದಡ್ಕದಲ್ಲಿ ಇತ್ತೀಚೆಗೆ ನಡೆದ ಅರೆಭಾಷೆ ಗಡಿನಾಡ ಉತ್ಸವ ಸಂದರ್ಭದಲ್ಲಿ ಇದೇ ಬೇಡಿಕೆಯಿರಿಸಿ ಉದುಮ ಶಾಸಕ ಸಿ.ಎಚ್.ಕುಂಞಂಬು ಅವರಿಗೂ ಮನವಿ ಸಲ್ಲಿಸಲಾಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಕೂಡ ಈ ಮಾರ್ಗದಲ್ಲಿ ಬಸ್ ಆರಂಭಿಸಬೇಕಾದ ಅವಶ್ಯಕತೆಯ ಬಗ್ಗೆ ಸಚಿವರಿಗೆ ವಿವರಿಸಿದರು.
ಗಡಿನಾಡ ಕನ್ನಡಿಗರ ಸಂಘದ ಪುರುಷೋತ್ತಮ ಬೊಡ್ಡನಕೊಚ್ಚಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಮತ್ತಿತರರು ಉಪಸ್ಥಿತರಿದ್ದರು.