ಸುಳ್ಯ: ಸುಳ್ಯ ನಗರದಲ್ಲಿ ರಸ್ತೆ ಮಧ್ಯೆಯ ವಿದ್ಯುತ್ ಕಂಬ ಸ್ಥಳಾಂತರಿಸದೆ ವಿದ್ಯುತ್ ಕಂಬವನ್ನೂ ಸೇರಿಸಿ ರಸ್ತೆ ಕಾಂಕ್ರೀಟ್ ಮಾಡಿರುವುದು ಗಂಭೀರ ವಿಚಾರ ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಸುಳ್ಯ ಸರಕಾರಿ ಆಸ್ಪತ್ರೆಯ ಕೆಳಭಾಗದ ಮೂಲಕ
ಸರಕಾರಿ ಪದವಿಪೂರ್ವ ಕಾಲೇಜು ಕಡೆಗೆ ತೆರಳುವ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ತೆರವು ಮಾಡದೆ, ಕಂಬ ಸೇರಿಸಿ ರಸ್ತೆ ಕಾಂಕ್ರೀಟ್ ಮಾಡಿರುವ ವಿಚಾರ ಜೂ.29ರಂದು ಸುಳ್ಯ ತಾಲೂಕು ಪಂಚಾಯತ್ನಲ್ಲಿ ನಡೆದ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಈ ಕುರಿತು ಪರಿಶೀಲನೆ ನಡೆಸಿ ಮೆಸ್ಕಾಂ ಹಾಗೂ ನಗರ ಪಂಚಾಯತ್ಗೆ ನೋಟೀಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅವರು ತಾ.ಪಂ.ಇಒ ರಾಜಣ್ಣ ಅವರಿಗೆ ಸೂಚಿಸಿದರು.ಈ ರೀತಿ ಕಾಮಗಾರಿ ನಡೆಸಿ ಅಪಘಾತ ಉಂಟಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು ಯಾವುದೇ ರಸ್ತೆಯನ್ನು ಈ ರೀತಿ ಮಾಡಲು ಸಾಧ್ಯವಿಲ್ಲ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ, ಧನುಷ್ ಕುಕ್ಕೆಟ್ಟಿ, ಶೇಖರ ಕಣೆಮರಡ್ಕ, ಸೋಮಶೇಖರ ಕೇವಳ, ಈಶ್ವರ ಆಳ್ವ, ರಾಜು ನೆಲ್ಲಿಕುಮೇರಿ, ಅಬ್ಬಾಸ್ ಅಡ್ಪಂಗಾಯ, ವಿಜೇಶ್ ಹಿರಿಯಡ್ಕ, ರವಿ ಗಹಂಡ್ಯಡ್ಕ, ಭವಾನಿ ಕಲ್ನಡ್ಕ, ಸದಸ್ಯ ಕಾರ್ಯದರ್ಶಿ, ತಾ.ಪಂ. ಇ.ಒ. ರಾಜಣ್ಣ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.






