ಸುಳ್ಯ:ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮೈತಡ್ಕ ಎಂಬಲ್ಲಿ ಪಯಸ್ವಿನಿ ನದಿಗೆ ಸೇತುವೆ ನಿರ್ಮಾಣಕ್ಕೆ 10 ಕೋಟಿ ಅನುದಾನ ಮಂಜೂರಾಗಿದೆ ಎಂದು ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ, ಕೆ.ಪಿ.ಸಿ.ಸಿ ಸಂಯೋಜಕ ಎಸ್ ಸಂಶುದ್ದೀನ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ನಡೆಸಿದ ನಿರಂತರ ಪ್ರಯತ್ನದಿಂದ ಮೈತಡ್ಕ ಸೇತುವೆಗೆ
ಸಚಿವ ಯು.ಟಿ ಖಾದರ್ ಶಿಪಾರಸ್ಸಿನ ಮೇರೆಗೆ ಲೋಕೋಪಯೋಗಿ ಇಲಾಖೆಯಿಂದ ರೂ.10 ಕೋಟಿ ಮಂಜೂರಾಗಿದೆ. ಸುಳ್ಯ ತಾಲೂಕಿನ ಮಂಡೆಕೋಲು, ಅಜ್ಜಾವರ, ಜಾಲ್ಲೂರು ಗ್ರಾಮಗಳ ಜನತೆಯ ಬಹು ವರ್ಷದ ಬೇಡಿಕೆಯಾದ ಮಂಡೆಕೋಲು ಗ್ರಾಮದ ಮೈತಡ್ಕ ಎಂಬಲ್ಲಿ ಸೇತುವೆ ನಿರ್ಮಾಣದ ಬೇಡಿಕೆಗೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರವರು, ಹಾಲಿ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿ ಹೊಳಿಯವರ ನೇತೃತ್ವದ ಕರ್ನಾಟಕ ಸರಕಾರ 2026-27ನೇ ಸಾಲಿನ ಆಯವ್ಯದಲ್ಲಿ

ಸೇತುವೆ ನಿರ್ಮಾಣಕ್ಕೆ ಮೀಸಲಿರಿಸಿದ 2000ಕೋಟಿ ಮೊತ್ತದಲ್ಲಿ ರೂ 10ಕೋಟಿಯನ್ನು ಮಂಜೂರು ಮಾಡಿದೆ. ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ, ಕೆಪಿಸಿಸಿ ಸಂಯೋಜಕ ಎಸ್ ಸಂಶುದ್ದೀನ್ ಅವರಿಗೆ ಮೈತಡ್ಕ ಸೇತುವೆ ನಿರ್ಮಾಣ ಹೋರಾಟ ಸಮಿತಿ,
ಅಧ್ಯಕ್ಷರು, ಬದ್ರಿಯಾ ಜುಮ್ಮಾ ಮಸ್ಟಿದ್ ಇರುವಂಬಳ್ಳ, ಅಜ್ಜಾವರ ಮತ್ತು ನಾಗರಿಕರು ಹಾಗೂ ಸೇತುವೆ ನಿರ್ಮಾಣಮಾಡುವಂತೆ ಮನವಿ ಸಲ್ಲಿಸಿ ಕೋರಿಕೊಂಡ ಮೇರೆಗೆ 2017ರಲ್ಲಿ ಆಗಿನ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ. ಹೆಚ್ ಸಿ ಮಹದೇವಪ್ಪ ರವರಿಗೆ ಕೆಪಿಸಿಸಿ ಸದಸ್ಯ ಡಾ. ಬಿ ರಘುರವರ ಶಿಪಾರಸ್ಸಿನೊಂದಿಗೆ ಎಸ್. ಸಂಶುದ್ದೀನ್ರವರು ಮನವಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಅಂದಾಜು ಪಟ್ಟಿ ತಯಾರಿಸಿ ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ

ಆ ಸಂದರ್ಭದಲ್ಲಿ ಮಂಜೂರಾತಿ ಆಗಿರುವುದಿಲ್ಲ.
2024ರಲ್ಲಿ ಮತ್ತೆ ಛಲ ಬಿಡದೆ ಪ್ರಯತ್ನಿಸಿದ ಎಸ್ ಸಂಶುದ್ದೀನ್ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಪಾರಸ್ಸು ಮತ್ತು ಮಾಜಿ ಸ್ಪೀಕರ್, ಪ್ರಸ್ತುತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು. ಟಿ ಖಾದರ್ರವರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಶಿಪಾರಸ್ಸು ಮಾಡಿದ್ದರು. ಈ ಹಿನ್ನಲೆಯಲ್ಲಿ 2026-27 ನೇ ಸಾಲಿನ ಆಯವ್ಯಯದಲ್ಲಿ 2025-26ನೇ ಸಾಲಿನ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಅನುಮೋದನೆಯಂತೆ ರೂ.10ಕೋಟಿಯನ್ನು ಮೈತಡ್ಕ ಸೇತುವೆಗೆ ಬಿಡುಗಡೆಗೊಳಿಸಿ ಆದೇಶ ಮಾಡಿದ್ದಾರೆ.
ಈ ಸೇತುವೆ ನಿರ್ಮಾಣದಿಂದ ಮಂಡೆಕೋಲು, ಅಜ್ಜಾವರ, ಜಾಲ್ಲೂರು ಗ್ರಾಮದ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ ಅತ್ಯಂತ ಹೆಚ್ಚಿನ ಪ್ರಯೋಜನವಾಗಲಿದೆ. ಈ ಸೇತುವೆಯು ಪಯಸ್ವಿನಿ ನದಿಗೆ

ಅಡ್ಡಲಾಗಿ ನಿರ್ಮಾಣವಾಗಲಿದ್ದು ನೆರೆಯ ಕೇರಳ ರಾಜ್ಯದ ಕಾಸರಗೋಡು ರಾಜ್ಯ ಹೆದ್ದಾರಿಯಿಂದ ಮಂಡೆಕೋಲು ಗ್ರಾಮದ ಮೂಲಕ ಕೇರಳ ರಾಜ್ಯದ ಆಡೂರು-ಬಂದಡ್ಕ ಭಾಗಕ್ಕೆ ಸಂಪರ್ಕಿಸುವುದರಿಂದ ಗಡಿನಾಡಿನ ಜನರ ಬಹು ನಿರೀಕ್ಷಿತ ಬೇಡಿಕೆ ಈಡೇರಿದಂತಾಗಿದೆ ಎಂದು ಎಸ್.ಸಂಶುದ್ದೀನ್ ಮಾಹಿತಿ ನೀಡಿದರು.
ತೂಗು ಸೇತುವೆ ಹೋರಾಟ ಸಮಿತಿಯ ಅಧ್ಯಕ್ಷ ರಾಮಚಂದ್ರ ಕೇನಾಜೆ ಮಾತನಾಡಿ ‘ಪಯಸ್ವಿನಿ ನದಿಯ ಮೈತಡ್ಕ – ಪಂಜಿಕಲ್ಲಿನಲ್ಲಿ ಸೇತುವೆ ನಿರ್ಮಾಣಕ್ಕೆ 2006ರಿಂದ ಹೋರಾಟ ನಡೆಸಿದ್ದೇವೆ. ಎಲ್ಲರಿಗೂ ಮನವಿ ಮಾಡಿದ್ದೇವೆ. ಇದೀಗ ಎಸ್.ಸಂಶುದ್ದೀನ್ರ ಮುಖಾಂತರ ಸೇತುವೆಗೆ ಅನುದಾನ ಮಂಜೂರಾಗಿದೆ. 2010ರಲ್ಲಿ ತೂಗುಸೇತುವೆ ಆಯಿತು. ಇದೀಗ ಬೃಹತ್ ಸೇತುವೆ ಅನುದಾನ ಬಂದಿದ್ದು ಶೀಘ್ರವೇ ಸೇತುವೆ ಕೆಲಸ ಆಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸೂಡಾ ಅಧ್ಯಕ್ಷ ಕೆ.ಎಂ.ಮುಸ್ತಫಾ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಮೂಸಾ ಕುಂಞಿ ಪೈಂಬೆಚ್ಚಾಲು, ಚೇತನ್ ಕಜೆಗದ್ದೆ, ರಕ್ಷಿತ್ ಗೂನಡ್ಕ, ಶಶಿಧರ ಎಂ.ಜೆ., ಹೋರಾಟ ಸಮಿತಿಯ ಉಪಾಧ್ಯಕ್ಷ ಯಾಹಿಯ ಎಂ.ಬಿ., ಕೋಶಾಧಿಕಾರಿ ಅಬೂತಾಹಿರ್ ಎಂ.ಬಿ., ಸಿರಾಜ್ ಮೈತಡ್ಕ ಉಪಸ್ಥಿತರಿದ್ದರು.







