ಸುಳ್ಯ: ಗೃಹಲಕ್ಷಿ ಯೋಜನೆಯಲ್ಲಿ ಮೃತಪಟ್ಟ ಫಲಾನುಭವಿಗಳ ಖಾತೆಗೆ ಹಣ ಜಮಾವಣೆ ಆಗಿರುವುದನ್ನು ಪತ್ತೆ ಹಚ್ಚಿ ಮರು ಜಮೆ ಮಾಡಲು ಎಲ್ಲಾ ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮೃತಪಟ್ಟವರ ವಿವರ, ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ಅದನ್ನು
ಸರಿ ಪಡಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಮರಣ ಹೊಂದಿದ 3,477 ಫಲಾನುಭವಿಗಳ ಖಾತೆಗೆ 3,34,84000 ರೂ ಜಮೆಯಾಗಿದೆ. ಸುಳ್ಯದಲ್ಲಿ 772 ಮಂದಿಯ ಖಾತೆಗೆ 23,32,000 ರೂ ಜಮೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿ ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಹಾಕಲು ಸರಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಫಲಾನುಭವಿಗಳು ಯಾವುದೇ ಗೊಂದಲ ಪಡುವ ಅಗತ್ಯ ಇಲ್ಲ, ಸರಕಾರದಿಂದ ನಿರ್ದೇಶನ ಬಂದ ಕೂಡಲೇ ಇಲಾಖೆಗಳು ಅಧಿಕೃತವಾಗಿ ಮಾಹಿತಿ ನೀಡಲಿದೆ ಎಂದು ಭರತ್ ಮುಂಡೋಡಿ ಹೇಳಿದರು.
ಎಲ್ಲಾ ಅರ್ಹ ಫಲಾನುಭವಿಗಳನ್ನು ಯೋಜನೆ ವ್ಯಾಪ್ತಿಗೆ ತರುವ ಕೆಲಸ ಮಾಡಲು ಸದಸ್ಯರು ಗಮನ ಹರಿಸಬೇಕು. ಯೋಜನೆಯಿಂದ ಅರ್ಹ ಫಲಾನುಭವಿಗಳು ಬಿಟ್ಟುಹೋಗದಂತೆ ಗ್ಯಾರಂಟಿ ಸಮಿತಿ ಸದಸ್ಯರು ಕೆಲಸ ಮಾಡಬೇಕು ಎಂದು ಅವರಯ ಹೇಳಿದರು.
ಕೋರೋನಾಕ್ಕೆ ಮೊದಲು ಸುಳ್ಯ ತಾಲೂಕಿನ ರೂಟ್ಗಳಿಗೆ ಇದ್ದ ಬಸ್ ಸಂಪರ್ಕವನ್ನು ಮತ್ತೆ ಪುನರಾಂಭ ಮಾಡಬೇಕು ಎಂದು ಭರತ್ ಮುಂಡೋಡಿ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಗಾಲ ಆರಂಭವಾಗಿದೆ ವಿದ್ಯುತ್ ಲೈನ್ನಲ್ಲಿ ಇರುವ ಅಪಾಯಕಾರಿ ಮರದ ಗೆಲ್ಲುಗಳನ್ನು ತೆರವು ಮಾಡಬೇಕು ಮತ್ತು ಅಪಾಯಕಾರಿ ತಂತಿಗಳನ್ನು ತೆರವು ಮಾಡಲು ಇ.ಒ ರಾಜಣ್ಣ ಮೆಸ್ಕಾಂ ಇಲಾಖೆಗೆ ಸೂಚನೆ ನೀಡಿದರು.
ಜುಲೈ. 6ರಂದು ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳು ಭಾಗವಹಿಸಬೇಕು. ಸಾರ್ವಜನಿಕರಿಂದ ದೂರು ಅರ್ಜಿಗಳನ್ನು ಸ್ವೀಕರಿಸಲು ವ್ಯವಸ್ಥೆ ಮಾಡಬೇಕು ಎಂದು ಭರತ್ ಮುಂಡೋಡಿ ಸೂಚಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ
ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.ಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ, ಧನುಷ್ ಕುಕ್ಕೆಟ್ಟಿ, ಶೇಖರ ಕಣೆಮರಡ್ಕ, ಸೋಮಶೇಖರ ಕೇವಳ, ಈಶ್ವರ ಆಳ್ವ, ರಾಜು ನೆಲ್ಲಿಕುಮೇರಿ, ಅಬ್ಬಾಸ್ ಅಡ್ಪಂಗಾಯ, ವಿಜೇಶ್ ಹಿರಿಯಡ್ಕ, ರವಿ ಗುಂಡ್ಯಡ್ಕ, ಭವಾನಿ ಕಲ್ಮಡ್ಕ, ಸದಸ್ಯ ಕಾರ್ಯದರ್ಶಿ, ತಾ.ಪಂ. ಇ.ಒ. ರಾಜಣ್ಣ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.






