ಸುಳ್ಯ:ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಮೊದಲ ಹಂತ ಮುಗಿದು ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದ್ದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 11,868 ಮಂದಿ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರ ನೊಂದಣಾಧಿಕಾರಿ ಜಯಲಕ್ಷ್ಮಿ ರಾಯಕೋಡ ಹೇಳಿದರು. ತಾಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸುಳ್ಯ ಕ್ಷೇತ್ರದಲ್ಲಿ
2,08,487 ಮಂದಿ ಮತದಾರರು ಇದ್ದು, ಇದರಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 1,96,619 ಮತದಾರರು ಸೇರಿದ್ದಾರೆ. ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ವೇಳೆ ಪೂರ್ವಭಾವಿಯಾಗಿ ಮ್ಯಾಪಿಂಗ್ ಮಾಡಲಾಗಿತ್ತು. 2002 ಮತದಾರರ ಪಟ್ಟಿಯಲ್ಲಿ ಇದ್ದ ಹೆಸರನ್ನು ಅವರ ತಂದೆ-ತಾಯಿ, ಸಂಬಂಧದ ನೆಲೆಯಲ್ಲಿ ಟ್ಯಾಗ್ ಮಾಡಿ ಕರಡು ಪಟ್ಟಿ ರಚನೆ ಮಾಡಲಾಗಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಅನುಮಾನಾಸ್ಪದ/ಸ್ಥಳಾಂತಗೊಂಡ/ಮೃತ/ದ್ವಿಪ್ರತಿ ಮತದಾರರೆನ್ನುವ ಎನ್ನುವ ನೆಲೆಯಲ್ಲಿ ಸುಮಾರು 11,868 ಮಂದಿಯನ್ನು ಗುರುತಿಸಿ ಎಸ್ಐಆರ್ನಿಂದ ಹೊರಗಿಡಲಾಗಿದೆ.
ಹೊರಗುಳಿದ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನಿಗದಿತ ಅವಧಿಯೊಳಗೆ ಭರ್ತಿ ಮಾಡಿದ ಎನ್ಯೂಮರೇಷನ್ ನಮೂನೆಯನ್ನು ಕಲ್ಪಿಸಲು ಸಾಧ್ಯವಾಗದ ಮತದಾರರು ಆಗಸ್ಟ್ 24 ರಿಂದ ಸೆಪ್ಟೆಂಬರ್ 23ರ ವರೆಗೆ ಆಕ್ಷೇಪಣೆಗಳ ಅವಧಿಯಲ್ಲಿ ನಿಗದಿತ ಘೋಷಣಾ ಪತ್ರದೊಂದಿದೆ 12ರಲ್ಲಿ ಯಾವುದರಲ್ಲಿ ಒಂದು ದಾಖಲೆಗಳನ್ನು ನೀಡಿ ನಮೂನೆ-6ನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಬಹುದು. ಬಿಎಲ್ಒಗಳೇ ಮನೆ ಮನೆಗೆ ತೆರಳಿ ಪಟ್ಟಿಯಿಂದ ಹೊರಗೊಳಿದ ಮತದಾರರಿಗೆ ನೋಟಿಸ್ ನೀಡುತ್ತಾರೆ ಎಂದರು.
ನಮೂನೆ 6 ರಲ್ಲಿ ಹೊಸ ಮತದಾರರಾಗಿ ನೋಂದಾಯಿಸಲು, ನಮೂನೆ 6ಎಯಲ್ಲಿ ಹೊಸ ಸಾಗರೋತ್ತರ ಮತದಾರರಾಗಿ ನೋಂದಾಯಿಸಿಸಲು, ನಮೂನೆ 7 ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವಿಕೆ, ನಮೂನೆ 8 ರಲ್ಲಿ ನಿವಾಸ ಸ್ಥಳ ಬದಲಾವಣೆ/ ತಿದ್ದುಪಡಿ/ ಎಪಿಕ್ ಬದಲಾವಣೆ/ ಗುರುತುಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ.
ಹೊರಗುಳಿದ ಮತದಾರರಿಗೆ ನೋಟಿಸ್ ಹಂತ ಮಾಡಲಾಗಿದ್ದು, ನೋಟಿಸ್ ವಿತರಣೆ, ವಿಚಾರಣೆ, ಮತ್ತು ಪರಿಶೀಲನೆ ನಡೆಯಲಿದೆ. ಬಳಿಕ ಎನ್ಯೂಮರೇಷನ್ ನಮೂನೆಗಳ ಕುರಿತು ಅಥವಾ ಆಕ್ಷೇಪಣೆ ಅರ್ಜಿಗಳ ವಿಲೇವಾರಿಯನ್ನು ಮತದಾರರ ನೋಂದಣಾಧಿಕಾರಿಗಳು ಮಾಡಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಯಾವುದೇ ವ್ಯಕ್ತಿಯ ಹೆಸರು ಕರಡು ಮತದಾರರ ಪಟ್ಟಿಯಲ್ಲಿದ್ದು, ವಿಚಾರಣೆ ನಂತರ ಮತದಾರರ ಪಟ್ಟಿಯಿಂದ ಕೈಬಿಟ್ಟಲ್ಲಿ, ಮತದಾರ ನೋಂದಣಾಧಿಕಾರಿಯ ಆದೇಶದ ದಿನಾಂಕದಿAದ 15ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳಿಗೆ ಮೊದಲ ಮೇಲ್ಮನವಿ ಸಲ್ಲಿಸಬಹುದು. ಮೊದಲ ಮೇಲ್ಮನವಿಯ ಆದೇಶದ ದಿನಾಂಕದಿಂದ 30 ದಿನಗಳ ಒಳಗೆ ಮುಖ್ಯ ಚುನಾವಣಾಧಿಕಾರಿಯ ಮುಂದೆ ಎರಡನೆಯ ಮೇಲ್ಮನವಿ ಸಲ್ಲಿಸಬಹುದು. ಒಟ್ಟಿನಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಮತ್ತು ಅನರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಸೇರಬಾರದು ಎನ್ನು ದೃಷ್ಟಿಯಿಂದ ಚುನವಣಾ ಆಯೋಗ ಈ ಕ್ರಮ ಕೈಗೊಂಡಿದೆ ಎಂದ ಅವರು ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗುವುದು ಎಂದರು.
ಸಾರ್ವಜನಿಕರು ಕರಡು ಮತದಾರ ಪ್ರತಿಯನ್ನು ವೀಕ್ಷಿಸಲು ceo.karnataka.gov.in ನಲ್ಲಿ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಕರ್ನಾಟಕ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್ಐಆರ್ ಪ್ರಕ್ರಿಯೆ ನಡೆದಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರವು ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ಬಿಎಲ್ಒಗಳು, ಗ್ರಾಮ ಆಡಳಿತಾಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾಗಳು, ರಾಜಕೀಯ ಪಕ್ಷದ ನಾಯಕರುಗಳು ಮತ್ತು ಕಾರ್ಯಕರ್ತರ ಸಹಕಾರದಿಂದ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಡಬ ತಹಸೀಲ್ದಾರ್ ಗಣೇಶ್, ಸುಳ್ಯ ಉಪ ತಹಸೀಲ್ದಾರ್ ಚಂದ್ರಕಾAತ್ ಎಂ.ಆರ್. ಉಪಸ್ಥಿತರಿದ್ದರು.









