ಸುಳ್ಯ:ಗ್ರಾಮೀಣ ಭಾಗದಲ್ಲಿ ಗ್ಯಾಸ್ ಬುಕ್ಕಿಂಗ್ಗೆ 45 ದಿನದ ಅವಧಿ ನೀಡಿರುವುದರಿಂದ ಗ್ಯಾಸ್ ಪಡೆಯಲು ಗ್ರಾಮೀಣ ಭಾಗದ ಜನರಿಗೆ ಅಗುತ್ತಿರುವ ಸಮಸ್ಯೆ ಗಮನದಲ್ಲಿದೆ. ಈ ಹಿನ್ನಲೆಯಲ್ಲಿ ಈ ಕುರಿತು ಅಡುಗೆ ಅನಿಲ ಪೂರೈಕೆ ಮಾಡುವ ಕಂಪೆನಿಯ ಮುಖ್ಯಸ್ಥರ ಜೊತೆ ಚರ್ಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ದರ್ಶನ್ ಎಚ್.ವಿ. ಹೇಳಿದರು. ಸುಳ್ಯದಲ್ಲಿ
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹಿಂದಿನಂತೆ ಸಕಾಲದಲ್ಲಿ ಸಿಲಿಂಡರ್ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಅಡುಗೆ ಅನಿಲ ಪೂರೈಕೆ ಮಾಡುವ ಮೂರು ಕಂಪೆನಿಗಳಿವೆ.ಬುಕ್ಕಿಂಗ್ಗೆ ದೀರ್ಘ ಅವಧಿ ಇರುವುದರಿಂದ
ಸಿಲಿಂಡರ್ ಪಡೆಯಲು ಜನರಿಗೆ ಆಗುವ ಸಮಸ್ಯೆಯ ಬಗ್ಗೆ ಸಂಸ್ಥೆಗಳಿಂದ ಮಾಹಿತಿ ಪಡೆಯಲಾಗಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿದ್ದ ಸಮಸ್ಯೆ ಈಗ ಸುಧಾರಿಸಿರುವುದರಿಂದ ಪೂರೈಕೆಯನ್ನು ಸಹಜ ಸ್ಥಿತಿಗೆ ತರುವಂತೆ ಕಂಪೆನಿಗಳಿಗೆ ತಿಳಿಸಲಾಗಿದೆ ಎಂದರು.ಸಿಲಿಂಡರ್ ಪೂರೈಕೆಯ ಅವಧಿಗೆ ಸಂಬಂಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಸುತ್ತೋಲೆ ಜಾರಿಯಲ್ಲಿರುವ ಕಾರಣ, ಅದರಲ್ಲಿ ಬದಲಾವಣೆ ಆಗುವವರೆಗೆ
ಸ್ಥಳೀಯವಾಗಿ ಪೂರೈಕೆ ವ್ಯವಸ್ಥೆಯಲ್ಲಿ ಸಂಪೂರ್ಣ ಮಾರ್ಪಾಡು ಮಾಡಲು ಸಾಧ್ಯವಿಲ್ಲ. ಕೇಂದ್ರದ ಮಟ್ಟದಲ್ಲಿ ಸುತ್ತೋಲೆ ಬದಲಾವಣೆಯಾದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕು ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವ ವ್ಯವಸ್ಥೆ ರೂಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಕ್ರಮ ಕೈಗೊಳ್ಳಲಾಗುವುದು. ಸಮಸ್ಯೆಗಳನ್ನು ಸ್ಥಳೀಯ ಹಂತದಲ್ಲೇ ಗುರುತಿಸಿ ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹರಿಸಲು ಇದರಿಂದ ಅನುಕೂಲವಾಗಲಿದೆ ಎಂದರು.
ಸುಳ್ಯ ನಗರದ ರಸ್ತೆ ಹಾಗೂ ಫುಟ್ಪಾತ್ಗಳ ಸಮಸ್ಯೆಗಳ ಕುರಿತು ಜಿಲ್ಲಾಡಳಿತದ ಗಮನವಿದೆ. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ನಗರ ರಸ್ತೆಗಳು ಹಾಗೂ ಫುಟ್ಪಾತ್ಗಳ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.







