ಸುಳ್ಯ:’ಎಲ್ಲೋ ಹುಟ್ಟಿ ಬೆಳೆದು, ಎಲ್ಲೋ ಶಿಕ್ಷಣ ಪಡೆದು ಉದ್ಯೋಗಿಯಾಗಿ ಇಲ್ಲಿಗೆ ಬಂದ ನನ್ನನ್ನು ನಿಮ್ಮವರಲ್ಲೊಬ್ಬನಾಗಿ ಸ್ವೀಕರಿಸಿರುವುದಕ್ಕೆ ಕೃತಜ್ಞತೆಗಳು. ಸುಳ್ಯದ ಜನರು ನೀಡಿದ ಪ್ರೀತಿ ವಿಶ್ವಾಸ ಎಂದಿಗೂ ಮರೆಯಲು ಸಾಧ್ಯವಿಲ್ಲ’… ಇದು ಸುಳ್ಯ ವಲಯದಲ್ಲಿ ಹಲವು ವರ್ಷಗಳ ಕಾಲ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗಿರುವ ಎನ್.ಮಂಜುನಾಥ್ ಅವರ ಭಾವುಕ ನುಡಿ.. ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆದ
ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾದ ಅಧಿಕಾರಿಗಳಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸುಳ್ಯದ ಜನರು ಹೃದಯವಂತರು, ರಾಜಕೀಯದವರು ಸೇರಿ ಎಲ್ಲರೂ ಸುಶಿಕ್ಷಿತರು. ಆದುದರಿಂದಲೇ ಇಲ್ಲಿ ಅಧಿಕಾರಿಗಳಿಗೆ ಇಲ್ಲಿ ಕೆಲಸ ಮಾಡಲು ಉತ್ತಮ ವಾತಾವರಣ ಇದೆ. ಯಾವುದೇ ಸಂದಿಗ್ಧ ಪರಿಸ್ಥಿತಿಯನ್ನೂ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಆದುದರಿಂದಲೇ ಆನೆಗಳು ಸೇರಿದಂತೆ

ವನ್ಯ ಪ್ರಾಣಿಗಳ ಹಾವಳಿ ಅಧಿಕ ಇದ್ದರೂ ಜನರು ಅತ್ಯಂತ ಸಂಯಮದಿಂದಲೇ ಸಹಕಾರ ನೀಡಿದ್ದಾರೆ. ತನ್ನ ಸೇವಾ ಅವಧಿಯ 23 ವರ್ಷಗಳಲ್ಲಿ ಸುಮಾರು 13 ವರ್ಷಗಳು ಸುಳ್ಯ, ಪಂಜ, ಸುಬ್ರಹ್ಮಣ್ಯ ವಲಯಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಇಲಾಖೆಯ ಸಿಬ್ಬಂದಿಗಳು, ಜನರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಸುಬ್ರಹ್ಮಣ್ಯ ಉಪವಿಭಾಗದ
ಸುಳ್ಯ ವಲಯ ಅರಣ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಎನ್.ಮಂಜುನಾಥ್, ಗಿರೀಶ್ ಆರ್, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯಾಗಿದ್ದ ವಿಮಲ್ ಬಾಬು ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯುತು. ಗಿರೀಶ್ ಆರ್, ಮತ್ತು ವಿಮಲ್ ಬಾಬು ಸನ್ಮಾನಕ್ಕೆ ಉತ್ತರಿಸಿ, ಕೃತಜ್ಞತೆ ಸಲ್ಲಿಸಿದರು.








