ಸುಳ್ಯ:ಡಿಸಿ ಮನ್ನಾ ಭೂಮಿಯನ್ನು ಯಾರೂ ಒತ್ತುವರಿ ಮಾಡುವಂತಿಲ್ಲ. ಡಿಸಿ ಮನ್ನಾ ಭೂಮಿ ಒತ್ತುವರಿ ಆಗಿದ್ದಲ್ಲಿ ಅದರ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್.ಹೆಚ್.ವಿ. ಹೇಳಿದ್ದಾರೆ. ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆ.20ರಂದು ನಡೆದ ಸುಳ್ಯ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು ಕೊರತೆ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಮಾತನಾಡಿದ
ಅಚ್ಚುತ ಮಲ್ಕಜೆ, ಚಂದ್ರಶೇಖರ ಪಲ್ಲತ್ತಡ್ಕ ಮತ್ತಿತರ ಮುಖಂಡರು ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಡಿಸಿ ಭೂಮಿ ಮನ್ನಾ ಒತ್ತುವರಿ ಆಗಿದೆ. ಡಿಸಿ ಮನ್ನಾ ಭೂಮಿಯಲ್ಲಿ ಕೆಲವೆಡೆ ಸರಕಾರಿ ಕಚೇರಿಗಳು ನಿರ್ಮಾಣ ಆಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಕುರಿತು ಮಾಹಿತಿ ತರಿಸಿ ಪರಿಶೀಲನೆ ನಡೆಸಲಾಗುವುದು.ಯಾರಾದರು ಒತ್ತುವರಿ ಮಾಡಿದ್ದರೆ ಅದನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು.ಸರಕಾರಿ ಉದ್ದೇಶಕ್ಕೆ ಬಳಸಿದ್ದರೆ ಬದಲಿ ಭೂಮಿಯನ್ನು ಕಾಯ್ದಿರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಗ್ರಾಮಗಳಲ್ಲಿ ಪ್ಲಾಟಿಂಗ್ ಆಗದ ಸಮಸ್ಯೆ ಇದೆ ಎಂದು ದೇವಪ್ಪ ನಾಯ್ಕ್ ಸಭೆಯ ಗಮನಕ್ಕೆ ತಂದರು. ಭಾಗಷಃ ಅರಣ್ಯ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.ಅರಣ್ಯ ಮತ್ತು ಕಂದಾಯ ಇಲಾಖೆಯ ಜಾಗದ ಸರ್ವೆ ನಡೆಸಿ ಗಡಿ ಗುರುತು ಮಾಡಲಾಗುತಿದೆ.ಸಮಸ್ಯೆ
ಪರಿಹಿಸಿ ಆದ್ಯತೆಯ ಮೇರೆಗೆ 94ಸಿ ಮತ್ತಿತರ ಹಕ್ಕು ಪತ್ರ ನೀಡುವ ಪ್ರಯತ್ನ ನಡೆಸಲಾಗುತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿಯಲ್ಲಿ 48 ಪರಿಶಿಷ್ಟ ಜಾತಿ ಕುಟುಂಬಕ್ಕೆ ಹಕ್ಕು ಪತ್ರ ದೊರೆತಿಲ್ಲ ಇದರಿಂದ ಮೂಲಭೂತ

ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ ಎಂದು ಅಚ್ಚುತ ಗುತ್ತಿಗಾರು ಹೇಳಿದರು. ಸಮೀಪದ ಕೆಲವರಿಗೆ 94ಸಿ ಹಕ್ಕು ಪತ್ರ ಸಿಕ್ಕಿದೆ ಎಂದು ಅವರು ಸಭೆಗೆ ತಿಳಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಎಂದು ಜಿಲ್ಲಾಧಿಕಾರಿ ತಹಶೀಲ್ದಾರ್ರಿಗೆ ತಿಳಿಸಿದರು.
ಜನಸಾಮಾನ್ಯರಿಗೆ ಮನೆ ಕಟ್ಟಲು ಕೆಂಪು ಕಲ್ಲು, ಮರಳು ದೊರೆಯದ ಸಮಸ್ಯೆ ಇದೆ, ಇದಕ್ಕೆ ಸಮಗ್ರ ಕಾನೂನು ರೂಪಿಸಿ ಮರಳು, ಕೆಂಪು ಕಲ್ಲು ಸಲೀಸಾಗಿ ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ಚನಿಯ ಕಲ್ತಡ್ಕ ಹೇಳಿದರು.
ಸುಳ್ಯದ ಅಂಬೇಡ್ಕರ್ ಭವನ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಇದರ ನಿರ್ಮಾಣ ಬೇಗನೇ ಪೂರ್ತಿ ಮಾಡಬೇಕು ಎಂದು ನಂದರಾಜ ಸಂಕೇಶ ಆಗ್ರಹಿಸಿದರು. ಈ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.ಸುಳ್ಯ ನಗರದಲ್ಲಿ ಅಮೃತ್ 2 ಯೋಜನೆ ಕಾಮಗಾರಿಗೆ ರಸ್ತೆಗಳನ್ನು ಕಡಿದು ಹಾಕಿ ಅದನ್ನು ಸರಿಯಾಗಿ ಮುಚ್ಚಿಲ್ಲ, ನೀರಿನ ಯೋಜನೆ ಸಮರ್ಪಕವಾಗಿ ಪೂರ್ತಿಗೊಂಡ ಬಳಿಕ ಮಾತ್ರ ನಗರ ಪಂಚಾಯತ್ಗೆ ಹಸ್ತಾಂತರ ಮಾಡಬೇಕು ಎಂದು ಶೀನಪ್ಪ ಬಯಂಬು ಹೇಳಿದರು. ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಇತರ ವ್ಯವಸ್ಥೆಗಳನ್ನು ಇನ್ನಷ್ಟು ಸಮರ್ಪಕವಾಗಿ ಮಾಡಬೇಕು ಎಂದು ಆನಂದ ಬೆಳ್ಳಾರೆ ಆಗ್ರಹಿಸಿದರು.
ಮಂಗಗಳ ಹಾವಳಿ ಮತ್ತಿತರ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರುತಿದೆ. ಇವುಗಳನ್ನು ಓಡಿಸಲು ಕೋವಿ ಪರವಾನಿಗೆ ನೀಡಬೇಕು ಎಂಬ ಬೇಡಿಕೆ ಕೇಳಿ ಬಂತು. ಈ ಬಗ್ಗೆ ಅರಣ್ಯಾಧಿಕಾರಿಗಳಿಂದ ವರದಿ ಪಡೆದು ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.
ವಿದ್ಯುತ್ ಕಡಿತ ಆದರೆ ಬಿಎಸ್ಎನ್ಎಲ್ ಟವರ್ ಸ್ಥಗಿತಗೊಂಡು

ನೆಟ್ ವರ್ಕ್ ಹೋಗ್ತಾ ಇದೆ, ನಗರ ಹಾಗೂ ಗ್ರಾಮಗಳಲ್ಲಿ ಬೀದಿ ನಾಯಿಗಳ ಉಪಟಳ ಜಾಸ್ತಿ ಆಗ್ತಾ ಇದೆ ಇದನ್ನು ನಿಯಂತ್ರಿಸಬೇಕು, ಸುಳ್ಯ ನಗರದ ಮೀನು ಮಾರುಕಟ್ಟೆ ಏಲಂ ಆಗದೆ ನಗರ ಪಂಚಾಯತ್ಗೆ ನಷ್ಟ ಉಂಟಾಗುತಿದೆ, ನಗರದ ಚರಂಡಿ, ರಸ್ತೆ ದುರಸ್ತಿ ಮಾಡಿಲ್ಲ ಇತ್ಯಾದಿ ವಿವಿಧ ಬೇಡಿಕೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಪ್ರಮುಖರಾದ ಸೀತಾನಂದ ಬೇರ್ಪಡ್ಕ,ಸಂಜಯ ಕುಮರ್ ಪೈಚಾರ್,ಬಾಬು ಕೆ.ಎಂ.ಜಾಲ್ಸೂರು, ವಿಜಯ ಆಲಡ್ಕ, ಗಿರಿಧರ ನಾಯ್ಕ್, ಶಂಕರ್ ಪೆರಾಜೆ, ಮಹೇಶ್ ಬೆಳ್ಳಾರ್ಕರ್, ಸರಸ್ವತಿ ಬೊಳಿಯಮಜಲು, ಭೋಜಪ್ಪ ನಾಯ್ಕ್, ಬಾಲಕೃಷ್ಣ ನಾಯ್ಕ್ ಅಜ್ಜಾವರ,ಗೋಪಾಲ ನಾಯ್ಕ್, ಪುಟ್ಟಣ್ಣ, ಹರೀಶ್ ಮತ್ತಿತರರು ವಿವಿಧ ಅಹವಾಲುಗಳನ್ನು ಮಂಡಿಸಿದರು.ಸಭೆಯಲ್ಲಿ ಪ್ರಮುಖರು ಮಂಡಿಸಿದ ವಿವಿಧ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅರ್ಜಿತ್ ಪರಾಗ್ ಡೊಂಗ್ರೆ, ತಹಶೀಲ್ದಾರ್ ಮಂಜುಳಾ, ಎಸಿಎಫ್ ಪ್ರಶಾಂತ್ ಕುಮಾರ್ ಪೈ, ಪುತ್ತೂರು ಉಪವಿಭಾಗ ಪೊಲೀಸ್ ಅಧೀಕ್ಷಕ ಪ್ರಮೋದ್ ಕುಮಾರ್ ಬಿ., ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







