ತಿರುವನಂತಪುರಂ:ಕೇರಳ ವಿಧಾನಸಭೆಯ ಉಪಸಭಾಪತಿಯಾಗಿ ಕಾಂಗ್ರೆಸ್ ಶಾಸಕಿ ಶಾನಿಮೋಲ್ ಉಸ್ಮಾನ್ ಆಯ್ಕೆಯಾಗಿದ್ದಾರೆ. 66 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದಿಂದ ಮಹಿಳೆಯೊಬ್ಬರು ಈ ಹುದ್ದೆ ಅಲಂಕರಿಸಿರುವುದು ವಿಶೇಷವಾಗಿದ್ದು, ಕೇರಳ ವಿಧಾನಸಭೆಯ ಇತಿಹಾಸದಲ್ಲಿ ಉಪಸಭಾಪತಿ ಸ್ಥಾನ ಅಲಂಕರಿಸಿದ
ನಾಲ್ಕನೇ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ವಿಧಾನಸಭೆಯಲ್ಲಿ ನಡೆದ ಔಪಚಾರಿಕ ಮತದಾನದ ಬಳಿಕ ಸ್ಪೀಕರ್ ತಿರುವಂಚೂರು ರಾಧಾಕೃಷ್ಣನ್ ಅವರು ಶಾನಿಮೋಲ್ ಉಸ್ಮಾನ್ ಅವರನ್ನು ಚುನಾಯಿತರೆಂದು ಘೋಷಿಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿಯಾಗಿದ್ದ ಉಸ್ಮಾನ್, ಸಿಪಿಐ ಅಭ್ಯರ್ಥಿ ಮುಹಮ್ಮದ್ ಮುಹಾಸಿನ್ ಅವರನ್ನು ಸೋಲಿಸಿದರು. 140 ಸದಸ್ಯರ ವಿಧಾನಸಭೆಯಲ್ಲಿ ನಡೆದ ಮತದಾನದಲ್ಲಿ ಶಾನಿಮೋಲ್ ಉಸ್ಮಾನ್ 99 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಮುಹಮ್ಮದ್ ಮುಹಾಸಿನ್ 34 ಮತಗಳನ್ನು ಪಡೆದರು. ನಾಲ್ವರು ಶಾಸಕರು ಗೈರುಹಾಜರಾಗಿದ್ದರು. ಬಿಜೆಪಿ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಅರೂರ್ ಕ್ಷೇತ್ರವನ್ನು ಪ್ರತಿನಿಧಿಸುವ ಶಾನಿಮೋಲ್ ಉಸ್ಮಾನ್ 2019ರ ಅಲಪ್ಪುಳ ವಿಧಾನಸಭಾ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು.
ಆದರೆ 2021ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ನಂತರ 2026ರ ವಿಧಾನಸಭಾ ಚುನಾವಣೆಯಲ್ಲಿ ಅರೂರ್ ಕ್ಷೇತ್ರದಿಂದ ಮತ್ತೆ ಗೆದ್ದು ವಿಧಾನಸಭೆಗೆ ಮರಳಿದರು.
ಕೇರಳ ವಿಧಾನಸಭೆಯ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿಯೊಬ್ಬರು ಉಪಸಭಾಪತಿ ಸ್ಥಾನ ಅಲಂಕರಿಸಿರುವುದು 66 ವರ್ಷಗಳ ಬಳಿಕ ಸಂಭವಿಸಿದೆ. 1960ರಲ್ಲಿ ಕಾಂಗ್ರೆಸ್ ನಾಯಕಿ ಎ. ನಫೀಸತ್ ಬೀವಿ ಈ ಹುದ್ದೆ ಅಲಂಕರಿಸಿದ್ದರು. ಇದಕ್ಕೂ ಮೊದಲು ಮೊದಲ ಕೇರಳ ವಿಧಾನಸಭೆಯಲ್ಲಿ ಸಿಪಿಐ ನಾಯಕಿ ಕೆ.ಒ. ಆಯಿಷಾ ಬಾಯಿ ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು. 1987ರಲ್ಲಿ ಸಿಪಿಐ ನಾಯಕಿ ಭಾರ್ಗವಿ ತಂಕಪ್ಪನ್ ಈ ಹುದ್ದೆ ಅಲಂಕರಿಸಿದ ಕೊನೆಯ ಮಹಿಳೆಯಾಗಿದ್ದರು.














