ಸುಳ್ಯ:ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ವತಿಯಿಂದ ಕನ್ನಡ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿರಂತರ ಒಂದು ವರ್ಷಗಳ ಕಾಲ ನಡೆಯುವ ಈ ಆಂದೋಲನದಲ್ಲಿ ರಾಜ್ಯದ 31 ಜಿಲ್ಲೆಗಳ 239 ತಾಲೂಕುಗಳಲ್ಲಿ ಮತ್ತು
ನೆರೆಯ 6 ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ಕನ್ನಡ ಯಾತ್ರೆ ಪ್ರಯಾಣ ನಡೆಸಲಿದೆ. ಸೆ.16ರಂದು ಯಾತ್ರೆ ಆರಂಭಗೊಂಡಿದ್ದು ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಲ್ಲಿ ಈಗಾಗಲೇ ಅಭಿಯಾನ ಪೂರ್ತಿ ಮಾಡಲಾಗಿದೆ. ಅ.28ರಿಂದ ಸುಳ್ಯ ತಾಲೂಕಿನ ಶಾಲೆಗಳಿಗೆ ಕನ್ನಡ ಯಾತ್ರೆ ನಡೆಯಲಿದೆ ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ಯಾತ್ರೆ ಮುಂದುವರಿಯಲಿದೆ. ಕನ್ನಡ ಶಾಲೆಗಳು ಎದುರಿಸುವ ವಿವಿಧ
ಸಮಸ್ಯೆಗಳನ್ನು ಪಟ್ಟಿ ಮಾಡಿ ಸರಕಾರದ ಗಮನಕ್ಕೆ ತರಲಾಗುವುದು. ಅಲ್ಲದೆ ಸರಕಾರದ ಗಮನ ಸೆಳೆಯಲು ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆಯನ್ನೂ ಹಮ್ಮಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.ಮುಚ್ಚುವ ಹಂತದಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು

ಉಳಿಸಬೇಕು, ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ, ಉಚಿತ ಶಿಕ್ಷಣ, ಉನ್ನತ ಶಿಕ್ಷಣ ದೊರೆಯಬೇಕು,ಪ್ರತಿ ಖಾಸಗಿ ಶಾಲೆಯಲ್ಲಿ ಕನ್ನಡ ಕಡ್ಡಾಯ ಮಾಡಬೇಕು, ಸರ್ಕಾರಿ ಕನ್ನಡ ಶಾಲೆಯಲ್ಲಿ ಕಲಿತವರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ಗಡಿನಾಡಿನ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಗೌರವ ಸಲಹೆಗಾರ ಪಿ.ಬಿ.ಸುಧಾಕರ ರೈ, ಅಭಿಯಾನದ ಸುಳ್ಯ ತಾಲೂಕು ಅಧ್ಯಕ್ಷ ಹಸೈನಾರ್ ಜಯನಗರ, ಸಂಘಟನಾ ಕಾರ್ಯದರ್ಶಿ ಅಶೋಕ್ ಪೀಚೆ, ಉಪಾಧ್ಯಕ್ಷರಾದ ಶಂಕರ್ ಪೆರಾಜೆ, ರಂಜಿತ್ ಪೂಜಾರಿ ಉಪಸ್ಥಿತರಿದ್ದರು.
ಸುಳ್ಯ ತಾಲೂಕಿನ ‘ಕನ್ನಡ ಯಾತ್ರೆ’ಗೆ ಪಿ.ಬಿ.ಸುಧಾಕರ ರೈ ಚಾಲನೆ ನೀಡಿದರು.









